ಹಳಿಯಾಳ: ಬಿಜೆಪಿ ಹಿಂದೆಂದಿಗಿಂತಲೂ ಈಗ ಹಳಿಯಾಳ ವಿಧಾನ ಸಭೆ ಕ್ಷೇತ್ರದಲ್ಲಿ ಹೆಚ್ಚು ಬಲಿಷ್ಠವಾಗಿದ್ದು, ಮಾಜಿ ಶಾಸಕ ಸುನೀಲ ಹೆಗಡೆ ಮುಂದಾಳತ್ವದಲ್ಲಿ ಪಕ್ಷ ಸಂಘಟಿತವಾಗಿ ಕಾರ್ಯ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಸೋಮವಾರ ಪಟ್ಟಣಕ್ಕೆ ಆಗಮಿಸಿದ ಅವರು ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಕ್ಷಕ್ಕೆ ಕಾರ್ಯಕರ್ತರೇ ಮೂಲ ಬಂಡವಾಳ. ಈಗ ನಮಗೆ ಅಧಿಕಾರ ಬಂದಿದ್ದು, ಎಲ್ಲರಿಗೂ ನ್ಯಾಯ ನೀಡುವಂತಹ ಜವಾಬ್ದಾರಿ ನಮ್ಮ ಮೇಲೆ ಇದೆ. ಕೋವಿಡ್-19 ಸಂಕಷ್ಟದ ಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಥವಾಗಿ ನಿಭಾಯಿಸುತ್ತ ಆರ್ಥಿಕ ಸ್ಥಿತಿಯ ಚೇತರಿಕೆಗಾಗಿ ಜಾರಿಗೊಳಿಸಿರುವ ಯೋಜನೆಯನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಸಹಪಾಠಿಗಳ ಸ್ಮರಣೆ: ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾಗ ಹಳಿಯಾಳಕ್ಕೆ ನೀಡುತ್ತಿದ್ದ ಭೇಟಿಯನ್ನು ಸ್ಮರಿಸಿ ಭಾವುಕರಾದ ಹೆಬ್ಬಾರ, ಹಳೆಯ ಗೆಳೆಯರಾದ ದತ್ತಾ ಮಡಿವಾಳ, ಪ್ರಕಾಶ ಗಿರಿ, ಪ್ರದೀಪ ಹಿರೇಕರ, ರಾಜು ದೂಳಿ ಮೊದಲಾದವರ ಹೆಸರನ್ನು ಸಭೆಯಲ್ಲಿ ಉಚ್ಛರಿಸಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಕೋವಿಡ್-19 ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆಯ ಮಾಹಿತಿ ನೀಡಲು ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲಾಗುವುದು ಎಂದರು.
ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿದರು. ಬಿಜೆಪಿ ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಅನಿಲ ಮುತ್ನಾಳ, ಮಾಜಿ ಅಧ್ಯಕ್ಷ ಶಿವಾಜಿ ನರಸಾನಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಾಜಿ ಪಾಟೀಲ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.