ಹುಬ್ಬಳ್ಳಿ: ಸಮಗ್ರತೆ, ಸಂರಕ್ಷಣೆ ದೃಷ್ಟಿಯಿಂದ ನಮ್ಮಲ್ಲಿಯೇ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು. ಪ್ರಧಾನಿ ಮೋದಿ ಅವರ ವೋಕಲ್ ಫಾರ್ ಲೋಕಲ್ ಕನಸನ್ನು ನನಸು ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ನ್ಯೂ ಕಾಟನ್ ಮಾರ್ಕೆಟ್ನ ಡಬ್ಲ್ಯುಬಿ ಪ್ಲಾಜಾ ಒಂದನೇ ಮಹಡಿಯಲ್ಲಿ ಆರಂಭಿಸಿರುವ ವಿಜಯ(ಎಂಆರ್ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿಯ 53ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಚೀನಾ ತಿರುಗಿ ಬಿದ್ದಾಗಲೆಲ್ಲ ಕೇಂದ್ರ ಸರ್ಕಾರ ಗಟ್ಟಿ ನಿಲುವು ತಾಳಿದೆ. ಜಿಎಸ್ಟಿ 2019ರ ಅಕ್ಟೋಬರ್ಗಿಂತ ಈ ಸಾಲಿನ ಅಕ್ಟೋಬರ್ ತಿಂಗಳ ಸಂಗ್ರಹ ಹೆಚ್ಚಾಗಿದೆ. ವಿದ್ಯುತ್ ಉತ್ಪಾದನೆ ಐದೂವರೆ ಪಟ್ಟು ಹೆಚ್ಚಳವಾಗಿದೆ. ಕಲ್ಲಿದ್ದಲು 2 ತಿಂಗಳಲ್ಲಿ ಶೇ. 32ರಷ್ಟು ಉತ್ಪಾದನೆ ಆಗಿದೆ. ದೇಶದ ಆರ್ಥಿಕತೆ ಹಳಿ ಮೇಲೆ ಬರಲಾರಂಭಿಸಿದೆ ಎಂದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮುರುಗೇಶ ನಿರಾಣಿ ಅವರು ಉತ್ತರ ಕರ್ನಾಟಕ ಅಲ್ಲದೆ, ದಕ್ಷಿಣ ಭಾಗಕ್ಕೂ ತೆರಳಿ ಕಾರ್ಖಾನೆ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಸಕ್ಕರೆ ಕಾರ್ಖಾನೆ ತೆರೆದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ವಾಗ್ದಾನ ನೀಡಿದರು.
ಮಾಜಿ ಸಚಿವ, ಶಾಸಕ ಮುರುಗೇಶ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ನಮ್ಮ ಕಂಪನಿ ಮೂರನೇ ಸ್ಥಾನದಲ್ಲಿದೆ. ಜನರ ಸಹಕಾರದಿಂದ ಸಹಕಾರ ರಂಗದಲ್ಲೂ ಯಶಸ್ಸು ಕಾಣುತ್ತಿದ್ದೇವೆ ಎಂದರು.
ಮೂರುಸಾವಿರ ಮಠದ ಡಾ. ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಾವೇರಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಇತರರು ಇದ್ದರು.
ರಾಷ್ಟ್ರೀಕೃತ ಬ್ಯಾಂಕ್ಗಳ ನಿಯಮ ಪಾಲಿಸುವುದು ರೈತರಿಗೆ ಸಾಧ್ಯವಾಗುವುದಿಲ್ಲ. ಸಾಲ ಪಡೆಯುವುದು, ಮರುಪಾವತಿ ವಿಳಂಬವಾದರೆ ಕಷ್ಟ ಎದುರಿಸಬೇಕಾಗುತ್ತದೆ. ಆದರೆ, ರೈತರಿಗೆ ನೇರವಾಗಿ ತಲುಪುವುದು ಸಹಕಾರಿ ಸಂಘ, ನಿಗಮಗಳು. | ಡಾ.ಕೆ. ಸುಧಾಕರ, ವೈದ್ಯಕೀಯ ಶಿಕ್ಷಣ ಸಚಿವ
ಉತ್ತರ ಕರ್ನಾಟಕದ ವಿಆರ್ಎಲ್ ಗ್ರುಪ್ ದೇಶದಲ್ಲಿಯೇ ಹೆಸರು ಮಾಡಿದೆ. ಅದೇ ರೀತಿ ನಿರಾಣಿ ಕಂಪನಿ ಕೂಡ ರಾಷ್ಟ್ರಮಟ್ಟಕ್ಕೆ ಬೆಳೆಯಬೇಕು. ರಿಸ್ಕ್ ತೆಗೆದುಕೊಂಡು ಬೆಳೆಯುವ ಛಾತಿ ಮುರುಗೇಶ ನಿರಾಣಿ ಅವರಿಗಿದೆ. | ಬಸವರಾಜ ಬೊಮ್ಮಾಯಿ, ಗೃಹ ಸಚಿವ