ಜಿಲ್ಲೆ

ಹಳಿ ತಪ್ಪಿದ ಸಿದ್ದರಾಮಯ್ಯ ಸರ್ಕಾರ

ಚಿತ್ರದುರ್ಗ: ರಾಜ್ಯದಲ್ಲಿ ಬರ ಎದುರಾದ ನಂತರ ಜನ, ಜಾನುವಾರು, ಜಮೀನುಗಳಲ್ಲಿನ ವಸ್ತುಸ್ಥಿತಿ ಅರಿಯುವ ಉದ್ದೇಶದಿಂದ 31 ಜಿಲ್ಲೆಗಳಲ್ಲಿ ಬಿಜೆಪಿ ಸಮೀಕ್ಷೆ ಹಮ್ಮಿಕೊಂಡಿದ್ದು, ನಾಯಕರ ನೇತೃತ್ವದ 15 ತಂಡಗಳು ಅಧ್ಯಯನ ನಡೆಸಲಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಳತ್ವ ವಹಿಸಿದ್ದಾರೆ ಎಂದು ಎಂಎಲ್ಸಿ ಕೆ.ಎಸ್.ನವೀನ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ತಂಡದಲ್ಲಿ ನನ್ನನ್ನು ಒಳಗೊಂಡಂತೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಎಂ.ಚಂದ್ರಪ್ಪ, ಬಿ.ಪಿ.ಹರೀಶ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ವಿ.ರಾಮಚಂದ್ರಪ್ಪ ಇರಲಿದ್ದಾರೆ ಎಂದರು.

ಈಗಾಗಲೇ ಬರ ಅಧ್ಯಯನ ಆರಂಭಿಸಿದ್ದು, ನ. 7ರಂದು ಬೆಳಗ್ಗೆ 10ಕ್ಕೆ ಜಿಲ್ಲೆಯ ಭರಮಸಾಗರ, ನಾಯಕನಹಟ್ಟಿ ಹೋಬಳಿ, ಮೊಳಕಾಲ್ಮುರಿನಲ್ಲಿ ದೇವರ ಎತ್ತುಗಳ ಮೇವಿನ ವಿಚಾರ, ಚಳ್ಳಕೆರೆಯಲ್ಲಿ ಸಣ್ಣ ಕೈಗಾರಿಕೆಗಳ ಮಾಲೀಕರೊಂದಿಗೆ ಸಭೆ, ಮಾಡದಕೆರೆ, ಐಮಂಗಲ ಹೋಬಳಿಯಲ್ಲಿ ಬರ ವೀಕ್ಷಿಸಲಿದ್ದು, ಸಂಜೆ 5.30ಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬರ ಪರಿಹಾರ ವಿತರಿಸುವ ಸಂಬಂಧ ಒಂದೂ ಸಭೆ ಮಾಡಿಲ್ಲ. ಜಿಲ್ಲೆಯಲ್ಲೂ ಸಾವಿರಾರು ಹೆಕ್ಟೇರ್ ಬಿತ್ತನೆ ಕೂಡ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡದೇ ಅಧಿಕಾರ ಹಂಚಿಕೆ ವಿಚಾರವಾಗಿ ಕಾಲಾಹರಣ ಮಾಡುತ್ತಿದೆ. ಆದ್ದರಿಂದ ನೀತಿಗೆಟ್ಟ ಸರ್ಕಾರ ಎಚ್ಚರಿಸಲು ಮುಂದಾಗಿದ್ದೇವೆ ಎಂದರು.

ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಈಗಾಗಲೇ ರೈತರನ್ನು ಐಸಿಯುನಲ್ಲಿ ಮಲಗುವಂತೆ ಮಾಡಿದ್ದಾರೆ. ಅದಕ್ಕೆ ಆಕ್ಸಿಜನ್ ಕೊಡುವ ಕೆಲಸವನ್ನೂ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬರಗಾಲ ಸಂಬಂಧ ಅಧಿಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ಸಂದಿಗ್ಧ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ಅವರು ವಿಧಾನಸೌಧ ಬಿಟ್ಟು ಹಳ್ಳಿಗಳ ಕಡೆ ಮುಖ ಮಾಡಿ, ವಸ್ತುಸ್ಥಿತಿ ಅರಿಯಬೇಕು ಎಂದು ಒತ್ತಾಯಿಸಿದರು.

ತೆಲಂಗಾಣ ವಿಧಾನಸಭೆ ಚುನಾವಣೆಗೆ ಹಣ ಹೊಂದಿಸುವ ಕೆಲಸ ಬಿಟ್ಟು ರಾಜ್ಯದ ಜನರ ಹಿತ ಕಾಪಾಡಲು ಗಮನ ಹರಿಸಬೇಕು. ಬಿಜೆಪಿ ಬರ ಅಧ್ಯಯನ ವರದಿ ತಯಾರಾದ ನಂತರ ಸಿಎಂಗೆ ಸಲ್ಲಿಸಿ ಪರಿಹಾರದ ಕ್ರಮಕ್ಕೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇತರರಿದ್ದರು.