ವಿಜಯಪುರ: ಆದಿಲ್ಶಾಹಿ ಸಾಹಿತ್ಯ ಮಾದರಿಯಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಸಮಗ್ರ ದಲಿತ ಸಾಹಿತ್ಯ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಭರವಸೆ ನೀಡಿದರು.
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗದಗ ದಲಿತ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎರಡು ದಿನ ನಡೆಯಲಿರುವ 10ನೇ ಅಖಿಲ ಭರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಈಗಾಗಲೇ ಆದಿಲ್ಶಾಹಿ ಕಾಲದ ಸಮಗ್ರ ಸಾಹಿತ್ಯ, ಡಾ. ಎಂ.ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯವನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ. ಈ ಮಾದರಿಯಲ್ಲಿಯೇ ದಲಿತ ಸಮಗ್ರ ಸಾಹಿತ್ಯವನ್ನು ಸಹ ಹೊರತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ ಎಂದರು.
ದಲಿತ ಸಾಹಿತ್ಯಕ್ಕೆ ವಿಶಾಲವಾದ ಅರ್ಥವಿದೆ. ಅನುಭವಿಸಿದ ಶೋಷಣೆ, ನೋವಿನ ವಿರುದ್ಧ ಪ್ರತಿಧ್ವನಿಯ ಸ್ವರೂಪವೇ ದಲಿತ ಸಾಹಿತ್ಯದ ಹಿಂದೆ ಇರುವ ಶಕ್ತಿ. ದಲಿತ ಸಾಹಿತ್ಯ ಒಂದು ನೈಜವಾದ ಸಾಹಿತ್ಯ. ಹೃದಯದಿಂದ ಬಂದ ಸಾಹಿತ್ಯ, ಅರ್ಥಪೂರ್ಣತೆ, ನೈಜತೆಯೇ ದಲಿತ ಸಾಹಿತ್ಯದ ಜೀವಾಳ. ದಲಿತ ಸಾಹಿತ್ಯ ದಲಿತರಿಗೆ ಸೀಮಿತವಾದ ಸಾಹಿತ್ಯವಲ್ಲ ಎಂದರು.
ಬಸವ ಧರ್ಮ ಜಾತಿ ರಹಿತ ಧರ್ಮ. ಸಮ ಸಮಾಜ ನಿರ್ಮಾಣವೇ ಬಸವಾದಿ ಶರಣರ ಆಶಯವಾಗಿತ್ತು, ಅನುಭವ ಮಂಟಪದ ಅವರ ಪರಿಕಲ್ಪನೆಯ ಅಂಶಗಳು ಭಾರತೀಯ ಶ್ರೇಷ್ಠ ಸಂವಿಧಾನದಲ್ಲಿ ಅಡಕವಾಗಿವೆ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಣ್ಣ ಬಸವಣ್ಣ ಜಗದ ಎರಡು ಕಣ್ಣುಗಳು. ಅವರಿಬ್ಬರು ಬೇರೆ ಅಲ್ಲವೇ ಅಲ್ಲ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಖ್ಯಾತ ಸಾಹಿತಿ ಡಾ. ಎಚ್.ಟಿ. ಪೋತೆ ಮಾತನಾಡಿ, ಜನರಿಂದ ಚುನಾಯಿತರಾದವರೇ ಸಂವಿಧಾನ ಬದಲಿಸುವುದಕ್ಕಾಗಿ ನಾವು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಪ್ರತಿಭಟಿಸುವ, ವಿರೋಧಿಸುವ ಸ್ವಭಾವ ದಲಿತರು, ಮಹಿಳೆಯರು ಕಳೆದುಕೊಳ್ಳುತ್ತಿದ್ದಾರೆ. ಈ ಎಲ್ಲ ವಿಷಯಗಳಿಗೆ ಸುಮ್ಮನಾದರೆ, ಮಣಿಪುರದ ಜನರಿಗೆ ಬಂದ ಸ್ಥಿತಿ ಎಲ್ಲರಿಗೂ ಬರಬಹುದು. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿರುವ ಅನುಚಿತ ವರ್ತನೆ ಖಂಡಿಸಬೇಕು ಎಂದರು.
ಬುದ್ಧವಿಹಾರದ ಸಂಘಪಾಲ ಬಂತೇಜಿ ಸಾನ್ನಿಧ್ಯ ವಹಿಸಿದ್ದರು. ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಅಲ್ಲಾಗಿರಿರಾಜ, ಮಾಜಿ ಶಾಸಕ ರಾಜು ಆಲಗೂರ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ದಲಿತ ಹೋರಾಟಗಾರ ಡಿ.ಜಿ. ಸಾಗರ, ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ಚಿಂತಕ ಪ್ರೊ. ಮಲ್ಲೇಪುರಂ ವೆಂಕಟೇಶ, ಡಾ. ವೈ.ಎಂ. ಭಜಂತ್ರಿ, ಶ್ರೀನಾಥ ಪೂಜಾರಿ, ಸುರೇಶ ಗೊಣಸಗಿ, ಡಾ. ಸುಜಾತಾ ಚಲವಾದಿ ಉಪಸ್ಥಿತರಿದ್ದರು.
10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಖ್ಯಾತ ಸಾಹಿತಿ ಡಾ. ಎಚ್.ಟಿ. ಪೋತೆ ಅವರನ್ನು ಬೆಳಗ್ಗೆ ಸಾರೋಟದಲ್ಲಿ ಮೆರವಣಿಗೆ ನಡೆಸಲಾಯಿತು. ಗಾಂಧಿವೃತ್ತದಿಂದ ಆರಂಭವಾದ ಮೆರವಣಿಗೆ ಕಂದಗಲ ಹನುಮಂತರಾಯ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ರಂಗಮಂದಿರದಲ್ಲಿ ಧ್ವಜಾರೋಹಣ ನೇರವೇರಿಸಿದ ಮೇಲೆ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.