ಹಾಸನ: ಹಳೇ ದ್ವೇಷದ ಹಿನ್ನಲೆಯಲ್ಲಿ ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಅಪರಾಧಿಗಳಿಗೆ ತಲಾ 20 ಸಾವಿರ ರೂ. ದಂಡ ವಿಧಿಸಿ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೆ. 12 ರಂದು ಆದೇಶಿಸಿದ್ದಾರೆ.
ಬೇಲೂರು ತಾಲೂಕು ಯಮಸಂಧಿ ಗ್ರಾಮದ ರಾಘವೇಂದ್ರ, ಮಂಜುನಾಥ ಹಾಗೂ ದುಗ್ಗೇಗೌಡ ಅಪರಾಧಿಗಳು. 2020ರ ಡಿ.15 ರಂದು ಗ್ರಾಮದ ಬಸವೇಗೌಡ ಅವರು ಬಸ್ ನಿಲ್ದಾಣದಲ್ಲಿ ಇತರರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ಮೂವರು ಜಮೀನು ದಾರಿಯ ವಿಚಾರವಾಗಿ ಜಗಳ ತೆಗೆದು ಕಲ್ಲು, ಬಿಯರ್ ಬಾಟಲಿ ಹಾಗೂ ಮಚ್ಚಿನಿಂದ ಬಸವೇಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಗಳ ಬಿಡಿಸಲು ಹೋದ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೇಲೂರು ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ಅಪರಾಧಿಗಳಿಗೆ ತಲಾ 20,000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಕೆ.ಎಸ್.ನಾಗೇಂದ್ರ ಅವರು ವಾದ ಮಂಡಿಸಿದ್ದರು.