ಜಿಲ್ಲೆ

ಹಲ್ಲೆ ಪ್ರಕರಣದಲ್ಲಿ ಒಬ್ಬನಿಗೆ ಜೈಲು, ಇಬ್ಬರಿಗೆ ದಂಡ

ತುಮಕೂರು ಡೆಸ್ಕ್

ಕೊರಟಗೆರೆ: ಪಟ್ಟಣದಲ್ಲಿ 2022ರ ಜನವರಿ 20ರಂದು ನಡೆದ ಹಲ್ಲೆ ಮತ್ತು ಬೆದರಿಕೆ ಪ್ರಕರಣದಲ್ಲಿ ಮಧುಗಿರಿ 4ನೇ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದ್ದು, ಮೊದಲನೇ ಅಪರಾಧಿ ಕೆ.ಟಿ.ವೆಂಕಟೇಶ್​ಗೆ 1 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿದೆ. ಅವರ ಪುತ್ರರಾದ ರೋಹಿತ್​ ಮತ್ತು ಕಿಶೋರ್​ಗೆ ತಲಾ 1 ಸಾವಿರ ದಂಡ ವಿಧಿಸಿದೆ. ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಶೆಡ್​ ನಿರ್ಮಿಸುತ್ತಿದ್ದ ಉಮಾಶಂಕರ್​, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್​ ಎಂಬುವವರ ಮೇಲೆ ಪಟ್ಟಣದ ಹನುಮಂತಪುರದ ನಿವಾಸಿಗಳಾದ ವೆಂಕಟೇಶ್​ ಕೆ.ಟಿ., ರೋಹಿತ್​ ಮತ್ತು ಕಿಶೋರ್​ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಆರೋಪಿಗಳು ಆ ಜಾಗವು ತಮಗೆ ಸೇರಿದ್ದೆಂದು ತಿಳಿಸಿ ಶೆಡ್​ ನಿಮಾರ್ಣಕ್ಕೆ ತಡೆ ನೀಡಲು ಯತ್ನಿಸಿದ್ದರು. ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ವಕೀಲರಾದ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.