ಜಿಲ್ಲೆ

ಹಲ್ಲೆ ನಡೆಸಿದ ಪ್ರೊ.ಮೇಲಕೇರಿ ಸಸ್ಪೆಂಡ್

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಎಂ. ವಿದ್ಯಾಸಾಗರ ಅವರಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಪಿ. ಮೇಲಕೇರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆ.28ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಸಸ್ಪೆಂಡ್ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದರಂತೆ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಅನುಮೋದನೆ ನೀಡಿರುವುದನ್ನು ಆಧರಿಸಿ ಸೆ.1ರಿಂದ ಜಾರಿಗೆ ಬರುವಂತೆ ಪ್ರೊ.ಮೇಲಕೇರಿ ಅವರನ್ನು ಅಮಾನತುಗೊಳಿಸಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಲಕೇರಿ ಸಹೋದರ ಪುತ್ರನೊಬ್ಬ ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಮಾಡುತ್ತಿದ್ದು, ನಿಯಮದಂತೆ ಪೂರ್ಣಾವಧಿ ಸಂಶೋಧನೆ ಮಾಡದೆ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಲೇ ಎಂ.ಫಿಲ್ ಮಾಡುತ್ತಿರುವುದರಿಂದ ವಿಭಾಗದ ಮುಖ್ಯಸ್ಥ ಪ್ರೊ.ವಿದ್ಯಾಸಾಗರ ಅವರು ಮೇಲಕೇರಿ ಸಹೋದರ ಪುತ್ರನಾಗಿರುವ ವಿದ್ಯಾರ್ಥಿಗೆ ಶಿಷ್ಯವೇತನ ಮಂಜೂರು ಮಾಡಿರಲಿಲ್ಲ. ಅಲ್ಲದೆ ಮುಚ್ಚಳಿಕೆ ಬರೆದುಕೊಡುವಂತೆ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದು ವಿಭಾಗಕ್ಕೆ ನುಗ್ಗಿ ವಿದ್ಯಾಸಾಗರ ಮೇಲೆ ಹಲ್ಲೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲ್ಲೆ ನಡೆಸಿದ್ದ ಮೇಲಕೇರಿ ವಿರುದ್ಧ ಈಗಾಗಲೇ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.