ಜಿಲ್ಲೆ

ಹಲ್ಲು, ನಾಲಿಗೆ ಶುಚಿಯಾಗಿರಿಸಿಕೊಳ್ಳಿ

ಶ್ರೀರಂಗಪಟ್ಟಣ: ಉತ್ತಮ ಆರೋಗ್ಯ ರಕ್ಷಣೆಗೆ ಹಲ್ಲುಗಳು ಮತ್ತು ನಾಲಿಗೆಯನ್ನು ನಿತ್ಯ ಶುಚಿಯಾಗಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಹಿರಿಯ ದಂತ ವೈದ್ಯೆ ಡಾ. ಜೆ.ಡಿ.ಸ್ಮಿತಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿ ಬಳಿಕ ಮಾತನಾಡಿದರು.


ಮನುಷ್ಯನ ಹಲವು ರೋಗಗಳು ಕಾಡುವ ಪ್ರಕ್ರಿಯೆ ಬಾಯಿಯಿಂದಲೇ ಅರಂಭವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ದಿನಕ್ಕೆ 2 ಬಾರಿ ಹಲ್ಲುಗಳನ್ನು ಶುಚಿಗೊಳಿಸಿ, ಕನಿಷ್ಠ 6 ತಿಂಗಳಿಗೊಮ್ಮೆ ಸನಿಹದಲ್ಲಿರುವ ದಂತ ವೈದ್ಯರಿಂದ ಹಲ್ಲು ಮತ್ತು ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಮನೆ ಸದಸ್ಯರಿಗೂ ಜಾಗೃತಿ ಮೂಡಿಸಿ ನಿರ್ಲಕ್ಷ ವಹಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.


ಶಿಬಿರಕ್ಕೆ ಚಾಲನೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆರೋಗ್ಯದ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.


ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಆಯೋಜಿಸಿದ್ದ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ಶಿಕ್ಷಕಿ ಹೂರ್ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅರಕೆರೆ ಆರೋಗ್ಯ ಕೇಂದ್ರದ ದಂತ ವೈದ್ಯೆ ಡಾ.ಅನುಪಮಾ, ಆರೋಗ್ಯ ಶಿಕ್ಷಣಾಧಿಕಾರಿ ಬೆನ್ನೂರ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಲಹೆಗಾರ ತಿಮ್ಮರಾಜು, ಉಪಪ್ರಾಚಾರ್ಯ ಅಶೋಕ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಕೂಡಲಕುಪ್ಪೆ ಸೋಮಶೇಖರ್ ಇತರರು ಇದ್ದರು.