ಚಾಮರಾಜನಗರ: ರಾಜ್ಯವು ಕರ್ನಾಟಕ ಎಂದು ನಾಮಕರಣಗೊಂಡು ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ಹಲ್ಮಿಡಿ ಶಾಸನ ಪ್ರತಿಕೃತಿ ನಿರ್ಮಾಣ ಮಾಡಲಾಗುತ್ತಿದೆ.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗದ ಆವರಣದಲ್ಲಿ ಹಲ್ಮಿಡಿ ಶಾಸನ ಪ್ರತಿಕೃತಿಯನ್ನು ಸ್ಥಾಪಿಸಲು ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿ 2023 ನ.1 ಕ್ಕೆ 50 ವರ್ಷಗಳು ತುಂಬಿತು. ಇದರ ನಿಮಿತ್ತ ವರ್ಷಪೂರ್ತಿ ಸುವರ್ಣ ಸಂಭ್ರಮೋತ್ಸವವನ್ನು ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಸುವರ್ಣ ಸಂಭ್ರಮೋತ್ಸವವನ್ನು ನಾಡಿನ ಜನ-ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ 2023 ನ.1 ರಂದು ಹಳ್ಳಿಯಿಂದ ರಾಜಧಾನಿವರೆಗೆ ಧ್ವಜಾರೋಹಣ, ಹಲವಾರು ಖ್ಯಾತ ಕವಿಗಳ ಗೀತ ಗಾಯನ, ವರ್ಷಪೂರ್ತಿ ರಥಯಾತ್ರೆ ಹಾಗೂ ಇನ್ನಿತರೆ ಹಲವಾರು ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಅದರಂತೆ ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸುವಂತೆ ಆದೇಶ ನೀಡಿತ್ತು. ಅದರಂತೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯನ್ನು ಒಳಗೊಂಡ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಕಳೆದ 2 ದಿನಗಳಿಂದ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೇ ನ.1 ಕನ್ನಡ ರಾಜ್ಯೋತ್ಸವದಂದು ಹಲ್ಮಿಡಿ ಶಾಸನದ ಪ್ರತಿಕೃತಿಯ ಉದ್ಘಾಟನೆಯಾಗಲಿದೆ.
ಕನ್ನಡದ ಮೊದಲ ಶಾಸನ:
ಹಳಗನ್ನಡ ಮತ್ತು ಬ್ರಾಹ್ಮಿ ಲಿಪಿಗಳನ್ನು ಹೋಲುವಂತಹ ಕನ್ನಡದ ಮೊಟ್ಟಮೊದಲ ಶಿಲಾ ಶಾಸನವನ್ನು ಹಲ್ಮಿಡಿ ಶಾಸನ ಎಂದು ಕರೆಯಲಾಗುತ್ತದೆ. ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ 1936 ರಲ್ಲಿ ಡಾ.ಎಂ.ಎಚ್.ಕೃಷ್ಣ ಎಂಬುವವರಿಂದ ಸಂಶೋಧಿಸಲ್ಪಟ್ಟಿತು. ಸುಮಾರು ಹದಿನಾರು ಸಾಲುಗಳನ್ನು ಹೊಂದಿರುವ ಈ ಶಾಸನವು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿ ಶಾಸನ ಇದಾಗಿದೆ. ಇದನ್ನು ಶಿಲ್ಪಿ ಕವಿಕುಬ್ಜ ಎಂಬುವವನು ಕೆತ್ತಿದ್ದಾನೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನವು ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ಒಳಗೊಂಡಿದೆ.
ಹಲ್ಮಿಡಿ ಶಾಸನದ ಮಹತ್ವ:
ಕನ್ನಡದ ಮೊದಲ ಶಾಸನವಾದ ಹಲ್ಮಿಡಿಯಲ್ಲಿ ಮೊದಲೆರೆಡು ಸಾಲುಗಳಲ್ಲಿ ಅಚ್ಯುತನ ಧ್ಯಾನವನ್ನು ಹೇಳಲಾಗಿದೆ. ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. ಪಲ್ಲವರ ಎದುರು ಹೋರಾಟ ಮಾಡಿ, ಕನ್ನಡಿಗರಾದ ಕದಂಬರಿಗೆ ವಿಜಯವನ್ನು ತಂದುಕೊಟ್ಟ ಕಾರಣಕ್ಕೆ ಎರಡು ಗ್ರಾಮಗಳನ್ನು ದತ್ತಿಯಾಗಿ ನೀಡಿದ ವಿವರವನ್ನು ಶಾಸನವು ಸಾರುತ್ತದೆ. ಅದಲ್ಲದೇ ಮತ್ತೊಂದು ಸಾಲಿನಲ್ಲಿ ಗದ್ದೆಯ ಉತ್ಪನ್ನದಲ್ಲಿ ಬ್ರಾಹ್ಮಣರಿಗೆ ಹತ್ತನೆಯ ಒಂದು ಭಾಗ ತೆರಿಗೆ ವಿನಾಯಿತಿ ನೀಡಿದ ಮಹತ್ವವನ್ನು ಉಲ್ಲೇಖಿಸಲಾಗಿದೆ. ಕನ್ನಡದ ಮಹತ್ವವನ್ನು ಜಗತ್ತಿಗೆ ಸಾರಿದ ಕನ್ನಡದ ಮೊಟ್ಟಮೊದಲ ಶಾಸನವನ್ನು ಜಿಲ್ಲಾ ಕೇಂದ್ರದಲ್ಲಿ ಪ್ರತಿಷ್ಠಾಪಿಸುವ ಮೂಲಕ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸುತ್ತಿದೆ.
ಕನ್ನಡದ ಮೊಟ್ಟಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕನ್ನಡದ ಮೊಟ್ಟಮೊದಲ ಕದಂಬ ರಾಜವಂಶಸ್ಥರ ಅವಧಿಯಲ್ಲಿ ಇದು ನಿರ್ಮಾಣವಾಗಿರುವುದು ಕೂಡ ಹೆಮ್ಮೆಯ ವಿಚಾರವಾಗಿದೆ. ಈ ಮೂಲಕ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಕಾರ್ಯ ಶ್ಲಾಘನೀಯ.
ಚಾ.ರಂ.ಶ್ರೀನಿವಾಸ್‌ಗೌಡ, ಅಧ್ಯಕ್ಷ, ಕರ್ನಾಟಕ ಸೇನಾಪಡೆ, ಚಾಮರಾಜನಗರ
ಜಿಲ್ಲಾ ಕೇಂದ್ರದಲ್ಲಿ ಹಲ್ಮಿಡಿ ಶಾಸನ ಪ್ರತಿಕೃತಿ ಅಳವಡಿಕೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಅದರಂತೆ ಜಿಲ್ಲಾ ರಂಗಮಂದಿರದ ಆವರಣದಲ್ಲಿ ಸ್ಥಳೀಯವಾಗಿ ದೊರೆತಿರುವ ಶಾಸನಗಳು ಹಾಗೂ ಡಾ.ರಾಜ್‌ಕುಮಾರ್ ಜೀವನ ಸಾರವನ್ನು ಬಿಂಬಿಸುವ ಮಾಹಿತಿಯನ್ನು ಹಾಕಬೇಕಿದೆ.
ಸ್ವಾಮಿ ಪೊನ್ನಾಚಿ, ಸಾಹಿತಿ, ಚಾಮರಾಜನಗರ