ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿ ಜತೆಗೆ ಖಾಕಿಪಡೆ ಬಗ್ಗೆ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ವಿನೂತನ ಹೆಜ್ಜೆ ಇರಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಇನ್ಮುಂದೆ ತಿಂಗಳಲ್ಲಿ ಎರಡು ದಿನ ಕಡ್ಡಾಯವಾಗಿ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದೆ.
ಶುಕ್ರವಾರವೇ ಈ ಹೊಸ ಪ್ರಯೋಗ ಜಾರಿಗೆ ಬಂದಿದೆ. ಮೊದಲ ದಿನ ಜಿಲ್ಲೆಯ 13 ಪೊಲೀಸ್ ಠಾಣೆಗಳಲ್ಲಿ ಫೋನ್ ಇನ್ ನಡೆಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂತರ್ಿ ಇಂಥದ್ದೊಂದು ಹೊಸ ಪರಿಕಲ್ಪನೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ ಜನರಲ್ಲಿ ಧೈರ್ಯ ತುಂಬುವ ಉದ್ದೇಶ ಹೊಂದಿದ್ದಾರೆ.
ಪ್ರತಿ ತಿಂಗಳ ಮೊದಲ ದಿನ ಹಾಗೂ 15ನೇ ತಾರೀಖಿನಂದು ಆಯಾ ಠಾಣೆಗಳಲ್ಲಿ ಡಿವೈಎಸ್ಪಿ ಸೇರಿ ಸಿಪಿಐ ಹಾಗೂ ಪಿಎಸ್ಐಗಳು ಫೋನ್ ಇನ್ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ಪರಿಹರಿಸುವಂತೆ ತಾಕೀತು ಮಾಡಲಾಗಿದೆ. ಈ ಮೂಲಕ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಪೊಲೀಸರನ್ನು ಕಂಡರೆ ಸಾರ್ವಜನಿಕರು ಅಷ್ಟಕಷ್ಟೆ ಎಂಬಂಥ ವಾತಾವರಣವಿದೆ. ಕಾರಣ ಜನರೊಂದಿಗೆ ಸಲೀಸಾಗಿ ಮಾತನಾಡುವುದು ಖಾಕಿಪಡೆಗೆ ಗೊತ್ತೇ ಇಲ್ಲ. ಕೆಲಸದ ಒತ್ತಡವೋ ಅಥವಾ ಸಾರ್ವಜನಿಕರೊಂದಿಗೆ ಏರು ಧ್ವನಿಯಲ್ಲಿ ಮಾತನಾಡಬೇಕು ಎಂಬ ಅಲಿಖಿತ ನಿಯಮ ಇದೆಯೋ ಭಗವಂತನೇ ಬಲ್ಲ. ಹೀಗಾಗಿ ಜನತೆ ಇವರನ್ನು ಕಂಡರೆ ಸಾಕು ಮಾರುದ್ದ ದೂರ ಹೋಗುತ್ತಾರೆ. ಹಾಗಂತ ಪೊಲೀಸ್ ವ್ಯವಸ್ಥೆ ಇಲ್ಲದೆ ಸಮಾಜದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಮಾಡಿದ ಪ್ರಮಾದಕ್ಕೆ ಇಡೀ ಆಡಳಿತ ಯಂತ್ರವನ್ನು ಸಮಾಜ ಇಂದು ಹಳದಿಗಣ್ಣಿನಿಂದ ನೋಡುವಂತಾಗಿದೆ.
ಈ ವಿಷಯವನ್ನು ಸೂಕ್ಷ್ಮವಾಗಿ ಅರಿತಿರುವ ಎಸ್ಪಿ ವೇದಮೂರ್ತಿ, ಮೊದಮೊದಲು ತಮ್ಮ ಕಚೇರಿಯಲ್ಲಿ ಫೋನ್ಇನ್ ಆಯೋಜಿಸುವ ಮೂಲಕ ಆಯಾ ಠಾಣೆ ವ್ಯಾಪ್ತಿಯಲ್ಲಿ ಬರುವ ದೂರುಗಳನ್ನು ವಿಂಗಡನೆ ಮಾಡಿ ಪರಿಹರಿಸಲು ಅಧೀನದ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು. ಬರುಬರುತ್ತ ಫೋನ್ ಇನ್ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವ ಕಾರಣ ಜಿಲ್ಲೆಯ ಎಲ್ಲ ಠಾಣೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲು ಮುಂದಾಗಿದ್ದಾರೆ.
ಕೆಲವರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಹಿಂದೇಟು ಹಾಕುತ್ತಾರೆ. ಮರ್ಯಾದೆ ಕಾರಣಗಳಿಂದ ಅನೇಕ ಅಪರಾಧ ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ಅಲ್ಲದೆ ಕೆಲ ದಲ್ಲಾಳಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಫಿಯರ್ಾದಿ ಮತ್ತು ಪೊಲೀಸರ ಬಳಿ ಹಣ ಕೀಳುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ.
ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಾರ್ವಜನಿಕರಿಗೆ ಪೊಲೀಸರನ್ನು ಕಂಡರೆ ನಂಬಿಕೆ, ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಎಸ್ಪಿ ವೇದಮೂರ್ತಿ ಕೈಗೊಂಡ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಆರಂಭ ಶೂರತನ ಬೇಡ
ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಫೋನ್ ಇನ್ ಆಯೋಜಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದು ಆರಂಭ ಶೂರತನವಾಗದೆ ಜನರಿಂದ ಕೇಳಿ ಬರುವ ದೂರುಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ನಜರ್ ಹರಿಸಿ ನೊಂದವರಿಗೆ ನ್ಯಾಯ ಒದಗಿಸಿದ್ದಲ್ಲಿ ಮಾತ್ರ ಇಷ್ಟೆಲ್ಲ ಪಟ್ಟ ಶ್ರಮಕ್ಕೆ ಸಾರ್ಥಕತೆ ಸಿಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.