ಅರಕಲಗೂಡು: ತಾಲೂಕಿನಲ್ಲಿ ವರುಣನ ಸಿಂಚನವಾಗುತ್ತಿದ್ದು, ಹಲವೆಡೆ ಜೋರು ಮಳೆಯಾಗದೆ ರೈತರಲ್ಲಿ ನಿರಾಸೆ ಮೂಡಿಸಿದೆ.
ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಬಿಟ್ಟು ಬಿಟ್ಟು ತುಂತುರು ಮಳೆ ಬೀಳುತ್ತಿದೆ. ಬನ್ನೂರು, ಮರಿಯಾನಗರ, ತರಿಗಳಲೆ, ಹಂಡ್ರಂಗಿ, ಹೆಗ್ಗಡಿಹಳ್ಳಿ, ದೊಡ್ಡಬೆಮ್ಮತ್ತಿ, ಹೊಳಲಗೋಡು ಹಾಗೂ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಸ್ವಲ್ಪಮಟ್ಟಿಗೆ ಹದ ಮಳೆ ಬಿದ್ದಿದೆ. ಹೀಗಾಗಿ ಈ ಭಾಗದಲ್ಲಿ ಬಿತ್ತನೆ ಕಾರ್ಯ ಸಾಗಿದೆ. ಅಲ್ಲದೆ ಬಿಸಿಲಿಗೆ ಬಾಡುತ್ತಿದ್ದ ಹೊಗೆಸೊಪ್ಪು, ಮುಸುಕಿನ ಜೋಳ ಮತ್ತಿತರ ಬೆಳೆಗಳು ಒಂದಿಷ್ಟು ಚೇತರಿಕೆ ಕಾಣಲಾರಂಭಿಸಿವೆ. ಕೆಲವು ಕಡೆ ಮಳೆಯಿಂದಾಗಿ ರೈತರು ಆಲೂಗಡ್ಡೆ, ಮುಸುಕಿನ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ರಾಮನಾಥಪುರ, ಕಸಬಾ, ದೊಡ್ಡಮಗ್ಗೆ, ಕೊಣನೂರು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು ಜೋರು ಮಳೆ ಬೀಳದೆ ರೈತರ ನಿರಾಸೆಗೆ ಕಾರಣವಾಗಿದೆ. ಕೊಣನೂರು, ರಾಮನಾಥಫುರ ಹೋಬಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆ ಬೆಳವಣಿಗೆಗೆ ಮಳೆ ಸಾಕಾಗುತ್ತಿಲ್ಲ. ಹೀಗಾಗಿ ರೈತರು ಜೋರು ಮಳೆಯಾಗಲಿ ಎಂದು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.