ಜಿಲ್ಲೆ

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಹನಗೋಡು: ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರೆ, ಉಳಿದ ಅರ್ಜಿಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭರವಸೆ ನೀಡಿದರು.

ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಹೆಚ್ಚು ಆದಿವಾಸಿ ಹಾಡಿಗಳಿರುವುದರಿಂದ ಈ ಗ್ರಾಮ ಆಯ್ಕೆ ಮಾಡಿದ್ದು, ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು. ಕಾನೂನು ತೊಡಕು, ವಿವಾದಿತ ಪ್ರಕರಣಗಳಿದ್ದಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.

ಸಣ್ಣಪುಟ್ಟ ರಸ್ತೆ, ಮತ್ತಿತರ ಸಮಸ್ಯೆಗಳಿಗೆ ಮಳೆ ಹಾನಿ ಯೋಜನೆಯಡಿ ಪರಿಹಾರ ಸೂಚಿಸಲಾಗುವುದು. ಹೆಚ್ಚಿನ ಅನುದಾನ ಅವಶ್ಯಕತೆ ಇದ್ದಲ್ಲಿ ಶಾಸಕರ ಗಮನಕ್ಕೆ ತಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೆರೆ, ಸ್ಮಶಾನ, ರಸ್ತೆ ಒತ್ತುವರಿಯನ್ನು ಅಧಿಕಾರಿಗಳ ತಂಡ ಪರಿಶೀಲಿಸಿ ಕಾಲಮಿತಿಯೊಳಗೆ ಕ್ರಮವಹಿಸಲಾಗುವುದು ಎಂದರು.

ನೇರಳಕುಪ್ಪೆ ಬಿ.ಹಾಡಿಯ ವೃದ್ದೆ ಕೆಂಪಮ್ಮ ಸೇರಿದಂತೆ 6 ಜನ ಆದಿವಾಸಿಗಳು ತಮಗೆ ಸ.ನಂ. 23, 24 ಮತ್ತು 16ರಲ್ಲಿನ ಭೂಮಿಯನ್ನು 70ವರ್ಷಗಳಿಂದಲೂ ನಾವೇ ಉಳುಮೆ ಮಾಡುತ್ತಿದ್ದೇವೆ. ಬೇರೆಯವರ ಹೆಸರಿಗೆ ಆರ್‌ಟಿಸಿ ಮಾಡಿದ್ದಾರೆ. ನಾವು ಸಾಯುವ ಮುನ್ನವೇ ನಮ್ಮ ಭೂಮಿಯ ಒಡೆತನ ಕೊಡಿಸಿ, ದಾಖಲಾತಿ ಮಾಡಿಕೊಡಿ ಎಂದು ಮನವಿ ಮಾಡಿದರು.

ಗಿರಿಜನರ ಸ್ವಾಧೀನದಲ್ಲಿರುವುದರಿಂದ ಉಚಿತ ಕಾನೂನು ನೆರವು ಕಲ್ಪಿಸುವುದು. ಇದೇ ಭೂಮಿಯನ್ನು ವಾಲ್ಮೀಕಿ ನಿಗಮದ ವತಿಯಿಂದ ಖರೀದಿ ಮಾಡಿ ಗಿರಿಜನರಿಗೆ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿ, ಈ ಬಗ್ಗೆ ಕ್ರಮ ವಹಿಸಲು ಗ್ರಾಮದ ಮುಖಂಡರಿಗೆ ಸೂಚಿಸಿದರು.

ಗಿರಿಜನ ಕುಟುಂಬದ ಕರಿಯಪ್ಪ ಮಾತನಾಡಿ, ಹಲವು ಗಿರಿಜನರಿಗೆ ಓಟರ್ ಐಡಿ, ಆಧಾರ್ ಕಾರ್ಡ್ ಮಾಡಿಕೊಡಲು ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇಲ್ಲಿ ವಾಸವಿರುವುದರಿಂದ ವಾಸಸ್ಥಳ ದೃಢೀಕರಣ ಪತ್ರ ಪಡೆದು ಸಂಜೆಯೊಳಗೆ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ನೀಡಲು ಆದೇಶಿಸಿದರು.

ಆದಿವಾಸಿ ಚಂದ್ರು ಎಂಬಾತ ಕಳೆದ ನಾಲ್ಕು ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದು, ಮನೆಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲವೆಂಬ ದೂರಿಗೆ ಸಂಜೆಯೊಳಗೆ ಸಂಪರ್ಕ ಕಲ್ಪಿಸಿದರು. ವಿಧವೆ, ವೃದ್ಧರು ತಮಗೆ ಮಾಶಾಸನ ಬಂದಿಲ್ಲವೆಂಬ ದೂರಿಗೆ, ಒಂದು ಗಂಟೆಯಲ್ಲೇ ತಾವೇ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಮಾಶಾಸನದ ಮಂಜೂರಾತಿ ಪತ್ರವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ವಿತರಿಸಿದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಈ ಗ್ರಾಮಕ್ಕೆ ಯಾವೊಬ್ಬ ಜಿಲ್ಲಾಧಿಕಾರಿಯೂ ಭೇಟಿ ನೀಡುವ ಮನಸ್ಸು ಮಾಡಿರಲಿಲ್ಲ, ಬದ್ಧತೆಯಿಂದ ಕೆಲಸ ಮಾಡುವ ಜಿಲ್ಲಾಧಿಕಾರಿಗಳಲ್ಲಿ ರಾಜೇಂದ್ರ ಸಹ ಒಬ್ಬರಾಗಿದ್ದು, ಅವರಿಂದ ಅನೇಕ ಸಮಸ್ಯೆಗಳು ಬಗೆಹರಿದಿವೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ವನ್ಯಜೀವಿ ಮತ್ತು ಮಾನವನ ಸಂಘರ್ಷ ಹೆಚ್ಚಿದೆ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಸೇರಿದಂತೆ ಬಸ್ ಸಮಸ್ಯೆ ಹಾಗೂ ಭೂಮಿಯ ದುರಸ್ತು ಸಮಸ್ಯೆ ಸಾಕಷ್ಟಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

255 ಮಂದಿಗೆ ಆದೇಶ ಪತ್ರವಿತರಣೆ: ಕಾರ್ಯಕ್ರಮದಲ್ಲಿ 127ಆಧಾರ್ ಕಾರ್ಡ್, 100 ಮಂದಿಗೆ ಮಾಸಾಶನ ಆದೇಶಪತ್ರ, 20ಮಂದಿಗೆ ಪಡಿತರ ಚೀಟಿ, 94ಸಿ ಅಕ್ರಮ ಸಕ್ರಮ ಕಾರ್ಯಕ್ರಮದಡಿ ಇಬ್ಬರಿಗೆ ಸಕ್ರಮ ಮಂಜೂರಾತಿ ಆದೇಶಪತ್ರ ಹಾಗೂ 6 ಮಂದಿಗೆ ಶೂನ್ಯ ಬ್ಯಾಲೆನ್ಸ್ ಅಡಿ ಬ್ಯಾಂಕ್ ಖಾತೆ ಆರಂಭದ ಆದೇಶ ಪತ್ರವನ್ನು ಗಣ್ಯರು ವಿತರಿಸಿದರು. ಇದಲ್ಲದೆ ಒಟ್ಟು 153ಅರ್ಜಿಗಳು ದಾಖಲಾದವು.

ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಸಮಸ್ಯೆಗೆ ಸ್ಪಂದಿಸಿ, ಶಿಕ್ಷಕರ ನೇಮಕ, ಬಸ್ ಸಮಸ್ಯೆ ಶೀಘ್ರ ಪರಿಹಾರಕ್ಕೆ ಭರವಸೆ ನೀಡಿದರು.

ಮುಖ್ಯಶಿಕ್ಷಕ ಕುಮಾರಸ್ವಾಮಿ ಶಾಲೆಯ ಪ್ರಗತಿಯನ್ನು ತಿಳಿಸಿದರು. ಶಾಸಕ ಮಂಜುನಾಥ್,ಉಪ ವಿಭಾಗಾಧಿಕಾರಿ ರುಚಿಬಿಂದಿಯಾ, ಇಒ ಮನು, ಬಿಇಒ ರೇವಣ್ಣ ಇದ್ದರು.
ಪೂರ್ಣಕುಂಭ ಸ್ವಾಗತ: ಗ್ರಾಮಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಇತರೆ ಅಧಿಕಾರಿಗಳನ್ನು ಕಚುವಿನ ಹಳ್ಳಿಯಿಂದ ನೇರಳಕುಪ್ಪೆವರೆಗೆ ಶಾಲಾ ಮಕ್ಕಳ ಬ್ಯಾಂಡ್‌ಸೆಟ್‌ನೊಂದಿಗೆ ಮಹಿಳೆಯರ ಪೂರ್ಣಕುಂಭ ಸ್ವಾಗತ ನೀಡಿ ಮೆರವಣಿಗೆಯಲ್ಲಿ ಕರೆದೊಯ್ದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರುಚಿಬಿಂದಿಯಾ, ತಹಸೀಲ್ದಾರ್ ಡಾ.ಅಶೋಕ್, ಡಿಡಿಎಲ್‌ಆರ್ ಶ್ರೀಮಂತಿನಿ, ಇಓ ಮನು, ತಾ.ಪಂ. ಆಡಳಿತಾಧಿಕಾರಿ ನಂದ, ಕೃಷಿ ಇಲಾಖೆ ಜೆ.ಡಿ.ರುದ್ರೇಶ್, ಗ್ರಾ.ಪಂ.ಅಧ್ಯಕ್ಷ ಉದಯನ್, ಉಪಾಧ್ಯಕ್ಷೆ ಜವರಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.