ಜಿಲ್ಲೆ

ಹಲವು ರೈತರಿಗೆ ಕೈ ಸೇರದ ಬೆಳೆ ನಷ್ಟ ಪರಿಹಾರ

ಚಿತ್ರದುರ್ಗ: ಬೆಳೆ ನಷ್ಟ ಪರಿಹಾರ ಸೇರಿ ನಾನಾ ಪಿಂಚಣಿಯನ್ನು ರೈತರ ಸಾಲಕ್ಕೆ ಜಮೆ ಮಾಡಿ ಕೊಳ್ಳುತ್ತಿರುವ ಬ್ಯಾಂಕ್‌ಗಳ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅನೇಕ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗುತ್ತಿಲ್ಲವೆಂಬ ಕೂಗೂ ಕೇಳಿ ಬರುತ್ತಿದೆ.
ಜಿಲ್ಲಾಧಿಕಾರಿ ಕಚೇರಿಗೆ ದೂರವಾಣಿ ಕರೆ ಮಾಡಿ ಪರಿಹಾರ ಬಂದಿಲ್ಲ ಎಂದು ದೂರುವ ರೈತರ ದೂರುತ್ತಿದ್ದಾರೆ. ಡಿಸಿ ಕಚೇರಿ ಮೂಲಗಳು ಕೂಡ ಇದನ್ನು ಖಚಿತಪಡಿಸಿವೆ.
ಮಳೆಯಾಶ್ರೀತ ಖುಷ್ಕಿ ಬೆಳೆ ನಷ್ಟಕ್ಕೆ ಪರಿಹಾರ ವಿತರಿಸಲಾಗುತ್ತಿದೆ. ಆದರೆ ಬೆಳೆ ನಷ್ಟಕ್ಕೆ ಪರಿಹಾರ ಬರುವುದಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಜಂಟಿ ಖಾತೆ ಪ್ರಕರಣಗಳಲ್ಲಿ ಮತ್ತೊಬ್ಬರು ಪರಿಹಾರ ಸ್ವೀಕರಿಸಲು ಒಪ್ಪಿಗೆ ಕೊಡದಿರುವುದು, ಆಧಾರ್ ಕಾರ್ಡ್-ಬ್ಯಾಂಕ್ ಖಾತೆಗೆ ಹೊಂದಾಣಿಕೆ ಆಗದಿರುವುದು. ಆಧಾರ್-ಬ್ಯಾಂಕ್ ಖಾತೆ ಹೆಸರಿನ ಮಿಸ್‌ಮ್ಯಾಚ್, ಎನ್‌ಪಿಸಿಐ ಫೀಡ್ ಆಗದಿರುವುದು, ಹಳೆ ಐಎಫ್‌ಎಸ್‌ಸಿ ಕೋಡ್ ಮೊದಲಾದ ತಾಂತ್ರಿಕ ಕಾರಣಗಳಿಂದ ಪರಿಹಾರ ಜಮಾ ಆಗಿದ್ದರೂ ಹೋಲ್ಡಿಂಗ್ ಆಗಿರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ನಾನಾ ಲೋಪಗಳ ಪೈಕಿ ಕೆಲವು ದೋಷಗಳನ್ನು ಗ್ರಾಮಾಡಳಿತಾಧಿಕಾರಿ(ವಿಎ)ಅಥವಾ ತಹಸೀಲ್ದಾರ್‌ಗಳ ಲಾಗಿನ್‌ನಲ್ಲಿ ಸರಿಪಡಿಸಲು ಸಾಧ್ಯವಿದೆ ಎನ್ನುತ್ತಿವೆ ಮೂಲಗಳು.
ಒಂದು ಹೆಕ್ಟೇರ್‌ಗೆ 8500 ರೂ.ಗಳಂತೆ ಗರಿಷ್ಠ 2 ಹೆಕ್ಟೇರ್‌ಗೆ 17 ಸಾವಿರ ರೂ.ಪಾವತಿಸಲಾಗುತ್ತಿದೆ. ಈ ಮೊತ್ತದಲ್ಲಿ ಈಗಾಗಲೇ ಸರ್ಕಾರ 2 ಸಾವಿರ ರೂ.ಬೆಳೆ ನಷ್ಟ ಭರಿಸಿದ್ದು, ಈ ಮೊತ್ತವನ್ನು ಕಟಾಯಿಸಿ ಉಳಿದಿದ್ದನ್ನು ಜಮಾ ಮಾಡುತ್ತಿದೆ. ಮೇ 13ರ ಅಂತ್ಯಕ್ಕೆ ರಾಜ್ಯದ 2769668 ರೈತರಿಗೆ 2458.20 ಕೋಟಿ ರೂ.ಜಮಾ ಆಗಿದೆ.
ಅರ್ಹರಿಗೆ ಪರಿಹಾರ ಬಂದಿಲ್ಲವೆಂದಾದರೆ ತಹಸೀಲ್ದಾರ್, ಕೃಷಿ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಸಹಾಯಕ ಕೃಷಿ ನಿ ರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದೆಂದು ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ಹೇಳಿದ್ದಾರೆ.

*ಕೋಟ್
ಬೆಳೆ ನಷ್ಟ ಪರಿಹಾರ ಜಮಾ ಆಗುತ್ತಿದೆ. ಆದರೆ, ಅನೇಕ ರೈತರಿಗೆ ಪರಿಹಾರ ಜಮಾ ಆಗಿಲ್ಲವೆಂಬ ದೂರುಗಳಿವೆ. ಇದಕ್ಕೆ ಹಲವು ಕಾರಣಗಳಿರಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ಯಾರಿಗೆ ಪರಿಹಾರ ಬಂದಿಲ್ಲ ಎಂಬುದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಮೇ 15ರ ಅಂತ್ಯಕ್ಕೆ ಜಿಲ್ಲೆಯಲ್ಲಿ 1,31,776 ರೈತರಿಗೆ 114.78 ಕೋಟಿ ರೂ. ಬಂದಿದೆ. ಜಿಲ್ಲೆಯಿಂದ 240 ಕೋಟಿ ರೂ.ಬೆಳೆ ನಷ್ಟ ಪರಿಹಾರ ಕೋರಿಕೆ ಸಲ್ಲಿಸಲಾಗಿತ್ತು. ಶೇ.80 ರೈತರಿಗೆ ಪರಿಹಾರ ಜಮಾ ಆಗಿದೆ.
ಟಿ.ವೆಂಕಟೇಶ್, ಡಿಸಿ, ಚಿತ್ರದುರ್ಗ