ಗುಂಡ್ಲುಪೇಟೆ: ಪಟ್ಟಣದ ಪುರಸಭೆಯು ಕಬಿನಿ ನೀರು ಸರಬರಾಜು ನಿಲ್ಲಿಸಿರುವುದರಿಂದ ಬಡಾವಣೆಗಳ ನಿವಾಸಿಗಳು ಟ್ಯಾಂಕರ್ ಮೂಲಕ ನೀರು ಖರೀದಿಸುವಂತಾಗಿದೆ.
ಇತ್ತೀಚೆಗೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನ ಅಮೃತ್ ಟೌನ್ ಯೋಜನೆಯಲ್ಲಿ ಪೈಪ್ ಲೈನ್ ಬದಲಾವಣೆ ಮಾಡುತ್ತಿರುವುದರಿಂದ ಕಬಿನಿ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿಯೂ ಹಿಂದೆಯೇ ಕೊರೆದಿದ್ದ ಕೊಳವೆ ಬಾವಿಗಳ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ, ದೊಡ್ಡ ದೊಡ್ಡ ಬದಾವಣೆಗಳು ಹಾಗೂ ಎತ್ತರದಲ್ಲಿರುವ ವಾರ್ಡ್‌ಗಳಿಗೆ ಸಮರ್ಪಕ ನೀರು ಪೂರೈಕೆಯಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಗೃಹ ಬಳಕೆಗೆ ಅಗತ್ಯವಾದ ನೀರನ್ನು ಹಣಕೊಟ್ಟು ಟ್ಯಾಂಕರ್ ಮೂಲಕ ಖರೀದಿಸುತದತಿದ್ದಾರೆ.
ಪುರಸಭೆಯ ಅಧ್ಯಕ್ಷ ಕಿರಣ್ ಗೌಡ ಪ್ರತಿನಿಧಿಸುವ ಕೆ.ಎಸ್.ನಾಗರತ್ನಮ್ಮ ಬಡಾವಣೆಗೆ 20 ದಿನಗಳಿಂದ ನೀರಿನ ಸರಬರಾಜು ನಿಲ್ಲಿಸಲಾಗಿದೆ. ಬಡಾವಣೆಯಲ್ಲಿ ಸಾಕಷ್ಟು ಕೊಳವೆಬಾವಿಗಳಿಲ್ಲದ ಪರಿಣಾಮ ಮನೆಗಳಿಗೆ ಅಗತ್ಯ ನೀರು ಖರೀದಿಸಲೇಬೇಕಾಗಿದೆ. ಪ್ರತಿ ಟ್ಯಾಂಕ್ ನೀರಿಗೆ 800 ರೂ. ಪಾವತಿಸಿ ಖರೀದಿಸಬೇಕಾಗಿದೆ. ಆದ್ದರಿಂದ ಇನ್ನಾದರೂ ಪುರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲ ವಾರ್ಡ್‌ಗಳಿಗೂ ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿದ್ದಾರೆ.
ಪುರಸಭೆ ಅಧ್ಯಕ್ಷರೇ ಬಡಾವಣೆಯನ್ನು ಪ್ರತಿನಿಧಿಸುತ್ತಿದ್ದರೂ ವಾರ್ಡ್‌ಗೆ ಮೂಲ ಸೌಕರ್ಯಗಳು ಇಲ್ಲವಾಗಿದೆ. ಸ್ವಲ್ಪ ಮಳೆಬಿದ್ದರೂ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುವುದಿಲ್ಲ. ಮೊದಲಿನಿಂದಲೂ ಬಡಾವಣೆಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ, ಈ ಬಾರಿ 20 ದಿನಗಳಿಂದ ನೀರು ಸರಬರಾಜು ನಿಲ್ಲಿಸಲಾಗಿದ್ದು ಪ್ರತಿ ಟ್ಯಾಂಕರ್‌ಗೆ 800 ರೂ. ನೀಡಿ ನೀರು ಖರೀದಿಸಬೇಕಾಗಿದೆ. ಪುಟ್ಟರಾಜು. ಕೆ.ಎಸ್.ನಾಗರತ್ನಮ್ಮ ಬಡಾವಣೆ ನಿವಾಸಿ