ಜಿಲ್ಲೆ

ಹಲವಾರು ಯೋಜನೆಗಳ ನಿರ್ಮಾಣಕ್ಕೆ ಕಾರಣಕರ್ತ

ಮಳವಳ್ಳಿ: ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ಮನುಕುಲದ ಜೀವನ ಶೈಲಿಯನ್ನು ಸುಲಭಗೊಳಿಸಿರುವ ಇಂಜಿನಿಯರ್‌ಗಳನ್ನು ಸಮಾಜದ ಎಲ್ಲ ವರ್ಗದವರು ಗೌರವಿಸಬೇಕೆಂದು ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ತಿಳಿಸಿದರು.

ತಾಲೂಕಿನ ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಹಾಗೂ ವಿಶ್ವ ಓಜೋನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನಗಳು ಕಡಿಮೆಯಿದ್ದ ಕಾಲಘಟ್ಟದಲ್ಲಿ ವಿಶ್ವೇಶ್ವರಯ್ಯ ಅವರು ತಮ್ಮ ಇಂಜಿನಿಯರ್ ಶಿಕ್ಷಣದ ಜ್ಞಾನಶಕ್ತಿ ಬಳಸಿಕೊಂಡು ಕೃಷ್ಣರಾಜಸಾಗರ ಅಣೆಕಟ್ಟೆ ಸೇರಿದಂತೆ ಹಲವಾರು ಯೋಜನೆಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಅವರ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿರುವ ಡ್ಯಾಂ ಹಾಗೂ ವಿವಿಧ ಕಾರ್ಖಾನೆಗಳ ಕಟ್ಟಡಗಳು ಇಂದಿಗೂ ಸುಭದ್ರವಾಗಿವೆ ಎಂದು ಸ್ಮರಿಸಿದರು.

ಸಿ.ಎನ್.ನಂಜರಾಜು ಅವರು ವಿಶ್ವ ಓಜೋನ್ ದಿನದ ಬಗ್ಗೆ ಉಪನ್ಯಾಸ ನೀಡಿದರು. ಸಭೆಯಲ್ಲಿ ಇಂಜಿನಿಯರ್‌ಗಳಾದ ರೇಣುಕಾ ಪ್ರಸಾದ್ ಮತ್ತು ಯೋಗೇಶ್ ಅವರನ್ನು ಗೌರವಿಸಲಾಯಿತು. ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿಯಿತು. ಶೈಕ್ಷಣಿಕ ದಾನಿಗಳಾದ ಎಂ.ವಿ. ಸೋಮಶೇಖರ್ ಹಾಗೂ ಚಿಕ್ಕಣ್ಣಗೌಡ ಅವರು ವಿದ್ಯರ್ಥಿಗಳಿಗೆ ಶಿಕ್ಷಣ ಪರಿಕರಗಳನ್ನು ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶಂಭುಲಿಂಗಪ್ಪ, ಮುಖ್ಯ ಶಿಕ್ಷಕ ಆರ್.ಜಿ.ಮಹದೇವಸ್ವಾಮಿ, ಸಹ ಶಿಕ್ಷಕರಾದ ಮಲ್ಲಿಕಾರ್ಜುನ, ಪಂಕಜಾ, ಎಸ್.ಲೋಕೇಶ್, ಭಾಸ್ಕರ್, ರೋಜಾ, ಪುಟ್ಟಸ್ವಾಮಿ, ಕೆಂಪರಾಜು, ಪ್ರಭುಸ್ವಾಮಿ ಇದ್ದರು.