ಜಿಲ್ಲೆ

ಹಲವಾರು ಜವಾಬ್ದಾರಿ ನಿಭಾಯಿಸುತ್ತಾ ಜೀವನ ನಡೆಸಬೇಕು: ಡಾ. ಬಿ.ಕೆ. ಸೌಮ್ಯಮಣಿ

Hassan - Ramesh H R

ಹಾಸನ: ನಗರದ ಹೊರ ವಲಯ ಹೊಳೆನರಸೀಪುರ ರಸ್ತೆ ಬಳಿ ಇರುವ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಮಹಿಳಾ ವಿಭಾಗದ ವತಿಯಿಂದ ಭಾನುವಾರ ನಡೆದ ಸೃಷ್ಟಿ-2024 6ನೇ ರಾಜ್ಯಮಟ್ಟದ ವೈದಕೀಯ ಮಹಿಳಾ ವೈದ್ಯರ ಸಮಾವೇಶವನ್ನು ಉಪ ಕುಲಪತಿ ಡಾ. ಎಸ್. ಕಾಂತ ಉದ್ಘಾಟಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು, ಯುವ ವೈದ್ಯರು ಅನುಸರಿಸಬೇಕಾದ ನಿಯಮಗಳು, ವೈದ್ಯಕೀಯ ರಂಗದಲ್ಲಿನ ಮಹಿಳಾ ವೈದ್ಯರು ಸಹಜವಾಗಿಯೇ ಹೆಚ್ಚಿನ ಒತ್ತಡ ಸ್ಥಿತಿಯ ಬಗ್ಗೆ ತಿಳಿಸಿದಲ್ಲದೇ ವೈದ್ಯರಿಗೆ ಕೆಲ ಸಲಹೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಬಿ.ಕೆ. ಸೌಮ್ಯಮಣಿ ಅವರು ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಜೀವನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಆಕೆ ತನ್ನ ಭಾವನೆಗಳು, ದೇಹ ಸ್ಥಿತಿ ಮತ್ತು ಮನ ಸ್ಥಿತಿಗಳನ್ನು ಸಜ್ಜುಗೊಳಿಸಿಕೊಳ್ಳುವುದು ಅತಿ ಮುಖ್ಯವಾದ ಅಂಶವಾಗಿದೆ. ಅದರಲ್ಲೂ ವೈದ್ಯಕೀಯ ರಂಗದಲ್ಲಿನ ಮಹಿಳಾ ವೈದ್ಯರುಗಳು ಸಹಜವಾಗಿಯೇ ಹೆಚ್ಚಿನ ಒತ್ತಡದ ಸ್ಥಿತಿಯಲ್ಲಿರುತ್ತಾರೆ. ಮಹಿಳಾ ವೈದ್ಯ ತನ್ನ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸಿಕೊಂಡು ತನ್ನ ಕೌಟುಂಬಿಕ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಮಾನಿಸಿಕ ಹಾಗೂ ದೈಹಿಕವಾಗಿ ಸಜ್ಜುಗೊಳಿಸಿಕೊಂಡಾದ ಮಾತ್ರ ಸಮಾಜದ ಸುಧಾರಣೆಗೆ ತನ್ನನ್ನು ಕೊಡುಗೆಯಾಗಿಸಿಕೊಳ್ಳಲು ಸಾಧ್ಯ. ಮಹಿಳಾ ವೈದ್ಯರ ವೃತ್ತಿಪರತೆಯ ಜತೆಗೆ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಲು ಪೂರಕವಾಗುವಂತೆ ಸೃಷ್ಟಿ 2024 ಸಮಾವೇಶ ರಚಿಸಲ್ಪಟ್ಟಿದೆ ಎಂದು ಹೇಳಿದರು.
ಐಎಂಎ ರಾಜ್ಯ ಶಾಖೆಯ ಉಪಾಧ್ಯಕ್ಷೆ ಡಾ. ಸಾವಿತ್ರಿ ಮಾತನಾಡಿ, ಭಾರತೀಯ ವೈದ್ಯಕಿಯ ಸಂಘದ ಸದಸ್ಯರನ್ನು ಒಟ್ಟುಗೂಡಿಸುವುದು, ಅವರ ಗೌರವ ಮತ್ತು ಯೋಗ ಕ್ಷೇಮ ಕಾಪಾಡುವುದು, ಮಹಿಳಾ ವೈದ್ಯರಿಗೆ ಸಾಮಾಜಿಕ ಸ್ಥಾನಮಾನ, ಸೇವಾ ಭದ್ರತೆ ಕೊಟ್ಟು ಅವರನ್ನು ಪ್ರೋತ್ಸಹಿಸಬೇಕಾಗಿದೆ. ಸಭೆ, ಕಾರ್ಯಾಗಾರಗಳ ಮೂಲಕ ಮಹಿಳಾ ವೈದ್ಯರನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದರು.
ಸ್ವಯಂ ಆರೋಗ್ಯ ರಕ್ಷಣೆ ಎನ್ನುವ ಧ್ಯೇಯವಾಕ್ಯದೊಂದಿಗೆ ಈ ಸಮಾವೇಶ ರೂಪಿತಗೊಂಡಿದೆ. ಮಹಿಳಾ ವೈದ್ಯೆಯರು ವೈದ್ಯರಾಗಿ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿಕೊಂಡು ತನ್ನ ಕೌಟಂಬಿಕ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನದಲ್ಲಿ ನಿರ್ವಹಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ್, ಕಾರ್ಯದರ್ಶಿ ಡಾ ಬಿ.ಪಿ. ಕರುಣಾಕರ್, ಐಎಂಎ ಅಧ್ಯಕ್ಷ ಡಾ. ವಿ.ವಿ. ಚಿನಿವಾಲರ್, ಮಕ್ಕಳ ತಜ್ಞ ಡಾ. ದಿನೇಶ್, ಡಾ. ಹೊನ್ನೇಗೌಡ, ಡಾ. ಎಚ್.ಆರ್. ದೇವದಾಸ್, ಡಾ. ಎಚ್.ಜೆ. ತೇಜಸ್ವಿ, ಡಾ. ಕಾಮಿನಿ ಎ. ರಾವ್, ಡಾ. ಬಿ.ಜಿ. ವಾಗೀಶ್, ಡಾ. ಪ್ರವೀಣ್ ಶಾಸ್ತ್ರಿ, ಭಾರತಿ ರಾಜಶೇಖರ್, ಡಾ. ರಾಜಲಕ್ಷ್ಮೀ, ರಾಜ್ಯ ಶಾಖೆ ಸದಸ್ಯರಾದ ಕೆ.ವಿ. ಕಿರಣ, ರಂಗಲಕ್ಷ್ಮೀ, ಡಾ. ವೇದಾವತಿ ಇತರರು ಉಪಸ್ಥಿತರಿದ್ದರು.