ಹಾವೇರಿ: ಜಿಲ್ಲೆಯಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ನಡೆದ ಅವ್ಯವಹಾರ- ಅಕ್ರಮವನ್ನು ಬಹಿರಂಗಪಡಿಸಿ ‘ವಿಜಯವಾಣಿ’ ದಿನಪತ್ರಿಕೆ ಪ್ರಕಟಿಸಿದ ಸರಣಿ ವರದಿಗಳು ನಿಜ ಎಂಬುದು ಸಾಬೀತಾಗಿದೆ. ಅನೇಕ ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಪರಿಹಾರ ವಿತರಿಸಲಾಗಿದ್ದು, ಇದರಲ್ಲಿ ಶಾಮೀಲಾದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು (ಆರ್ಸಿ) ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಸಿಬ್ಬಂದಿ ಹಾಗೂ ಅಕ್ರಮ ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ನಡೆದಿರುವ ಕುರಿತು ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ಯು ಸರಣಿ ವರದಿಗಳನ್ನು ಬರೆದು, ಅವ್ಯವಹಾರ ಬಯಲಿಗೆಳೆದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ತನಿಖೆ ನಡೆಸಿ ವರದಿ ನೀಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದರು. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಗಳು ತಪಾಸಣೆ ವರದಿಯನ್ನು ನೀಡಿದ್ದು, ’ವಿಜಯವಾಣಿ‘ ದಿನಪತ್ರಿಕೆ ಬಹಿರಂಗಗೊಳಿಸಿದ ಅಕ್ರಮದ ಅಂಶಗಳನ್ನೇ ಈ ವರದಿ ಒಳಗೊಂಡಿದೆ.
ಕ್ರಿಮಿನಲ್ ಮೊಕದ್ದಮೆ ದಾಖಲು: ಫೆ. 15ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಪರಿಶೀಲನೆ ವರದಿಯನ್ನಾಧರಿಸಿ ಸವಣೂರ, ಶಿಗ್ಗಾಂವಿ, ಹಾನಗಲ್ಲ ತಾಲೂಕುಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ಆಯಾ ತಾಲೂಕು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಶಿಗ್ಗಾಂವಿ ಹಾಗೂ ಸವಣೂರ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಾಗೂ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ. ಈ ಮೂರೂ ತಾಲೂಕುಗಳ ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು, ಡಾಟಾ ಎಂಟ್ರಿ ಆಪರೇಟರ್ಗಳ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಶಿಗ್ಗಾಂವಿ ತಾಲೂಕಿನ 3, ಸವಣೂರ ತಾಲೂಕಿನ 11 ಹಾಗೂ ಹಾನಗಲ್ಲ ತಾಲೂಕಿನ 28 ಫಲಾನುಭವಿಗಳ ವಿರುದ್ಧವೂ ಅಕ್ರಮವಾಗಿ ಪಡೆದ ಮೊಕದ್ದಮೆ ದಾಖಲಿಸಿದ್ದಾರೆ. ಅಕ್ರಮ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಇತರರು ಎಂದು ಕೂಡ ದೂರಿನಲ್ಲಿ ನಮೂದಿಸಲಾಗಿದೆ.
ಒಟ್ಟು 2,281 ಕಾನೂನುಬಾಹಿರ ಪ್ರಕರಣಗಳು ಬೆಳಕಿಗೆ: ಬೆಳಗಾವಿ ಪ್ರಾದೇಶಿಕ ವಿಭಾಗದ ಕಚೇರಿಯ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಭೂಮಿ ಪರಿಹಾರ ತಂತ್ರಾಂಶದಲ್ಲಿ ಪ್ರಾಯೋಗಿಕವಾಗಿ ಪರಿಶೀಲಿಸಿ ಅಂಕಿ, ಅಂಶಗಳನ್ನು ಪಡೆದುಕೊಂಡು ರೈತರಿಗೆ ಸಂದಾಯವಾದ ಪರಿಹಾರದ ಮಾಹಿತಿಯನ್ನು ಪಡೆದು ಪರಿಶೀಲಿಸಿದ್ದಾರೆ. ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ (ಐಜಛ್ಟಿಜಿಠಿಛಿಛ ್ಝ್ಞ ಚ್ಠಿಠಿ ್ಞಠಿ ಞ್ಠಠಿಚಠಿಛಿಛ) ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ಅನುಮೋದನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅಂತಹ 2,281 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ ಶಿಗ್ಗಾಂವಿ ತಾಲೂಕಿನಲ್ಲಿ ಅತಿ ಹೆಚ್ಚು 702, ಹಾವೇರಿ ತಾಲೂಕಿನಲ್ಲಿ 624, ಹಾನಗಲ್ಲ 417, ಸವಣೂರ 222, ರಾಣೆಬೆನ್ನೂರ 200, ಬ್ಯಾಡಗಿ 94, ಹಿರೇಕೆರೂರ ತಾಲೂಕಿನಲ್ಲಿ 22 ಪ್ರಕರಣಗಳು ಪತ್ತೆಯಾಗಿವೆ.
ಆಯುಕ್ತರ ವರದಿಯಲ್ಲೇನಿದೆ? ಆರ್ಟಿಸಿ ಹೊಂದಿರುವ ವ್ಯಕ್ತಿ ಮೃತಪಟ್ಟಿದ್ದರೆ ಅವರ ವಂಶಸ್ಥರಿಗೆ ಪರಿಹಾರ ನೀಡಲು ಆಧಾರ್ ನಂಬರ್ ಬದಲಾವಣೆಗೆ ಅವಕಾಶ ನೀಡಿರುವ (ಐಜಛ್ಟಿಜಿಠಿಛಿಛ ್ಝ್ಞ ಚ್ಠಿಠಿ ್ಞಠಿ ಞ್ಠಠಿಚಠಿಛಿಛ) ಪ್ರಕರಣಗಳನ್ನು ರ್ಯಾಂಡಮ್ ಆಗಿ ಪರಿಶೀಲನೆ ನಡೆಸಿದಾಗ 68ಪ್ರಕರಣಗಳಲ್ಲಿ ಪರಿಹಾರದ ಹಣ ಪಡೆದವರ ಹೆಸರು, ಆರ್ಟಿಸಿಯಲ್ಲಿರುವ ಭೂಮಾಲೀಕರ ಹೆಸರು ವ್ಯತ್ಯಾಸವಿದ್ದು, ಕಾನೂನು ಬಾಹಿರವಾಗಿ ಅನ್ಯ ವ್ಯಕ್ತಿಗಳಿಗೆ ಪರಿಹಾರ ವಿತರಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಪರಿಶೀಲಿಸಿದ ಪ್ರಕರಣಗಳಲ್ಲಿ ಬೇರೆ ವ್ಯಕ್ತಿಗಳಿಗೆ ಯಾವ ಆಧಾರದ ಮೇಲೆ ಪರಿಹಾರ ವಿತರಣೆಯಾಗಿದೆ ಎಂಬುದಕ್ಕೆ ಪೂರಕ ದಾಖಲೆಗಳು ಇಲ್ಲ. ಇತರೆ ಅಂಶಗಳಿಗೆ ಸಂಬಂಧಿಸಿದಂತೆ ತಪಾಸಣೆ ತಂಡದಿಂದ ಪರಿಶೀಲನೆ ಪ್ರಗತಿಯಲ್ಲಿದೆ. ಈಗಾಗಲೇ ಪತ್ತೆಯಾಗಿರುವ 68 ಪ್ರಕರಣಗಳಲ್ಲಿ ಅನ್ಯ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ ಪರಿಹಾರ ವಿತರಣೆಯಾಗಿರುವ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ಡಾಟಾ ಎಂಟ್ರಿ ಆಪರೇಟರ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆಯನ್ನು 7 ದಿನದೊಳಗೆ ದಾಖಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನೀಡಿರುವ ವರದಿಯಲ್ಲಿ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.
ವಿಜಯವಾಣಿ ಪ್ರಕಟಿಸಿದ ಅಂಶಗಳು ವರದಿಯಲ್ಲಿ... ವಿಜಯವಾಣಿಯು ಹಾನಗಲ್ಲ ತಾಲೂಕಿನ ಶಿರಗೋಡ ಹಾಗೂ ಮಾವಕೊಪ್ಪ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅಕ್ರಮವಾಗಿರುವ ಕುರಿತು ವರದಿ ಪ್ರಕಟಿಸಿತ್ತು. ಇಲ್ಲಿನ 38 ಪ್ರಕರಣಗಳು ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಪ್ರಸ್ತಾಪವಾಗಿರುವುದು ವಿಶೇಷವಾಗಿದೆ.
ಶಿಗ್ಗಾಂವಿ, ಹಾನಗಲ್ಲ, ಸವಣೂರ ತಾಲೂಕುಗಳಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಲೋಪವಾಗಿರುವ ಕುರಿತು ಪ್ರಾದೇಶಿಕ ಆಯುಕ್ತರು ನೀಡಿರುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ದೂರು ದಾಖಲಿಸಲಾಗಿದೆ. | ಅನ್ನಪೂರ್ಣ ಮುದಕ್ಕಮ್ಮನವರ, ಉಪವಿಭಾಗಾಧಿಕಾರಿ, ಸವಣೂರ