ವಾಡಿ: ಹಲಕರ್ಟಿ ಹೊರವಲಯದ ದರ್ಗಾದಲ್ಲಿ ಸೂಫಿ ಸಂತ, ಹಜರತ್ ಖ್ವಾಜಾ ಸೈಯ್ಯದ್ ಮಹಮ್ಮದ್ ಬಾದೆಶಾಹ್ ಖಾದ್ರಿ ಚಿಸ್ತಿ ಯಮನಿ ಸಾಹೇಬ್ ಅವರ 46ನೇ ಉರುಸ್ ಜು.1ರಿಂದ ಆ.3ರವರೆಗೆ ಸಂಭ್ರಮದಿಂದ ನಡೆಯಲಿದೆ ಎಂದು ದರ್ಗಾ ಮುಖ್ಯಸ್ಥ ಖ್ವಾಜಾ ಸೈಯ್ಯದ್ ಅಬು ತುರಾಬ್ ಷಾ ಖಾದ್ರಿ ತಿಳಿಸಿದರು.
ಅದ್ದೂರಿಯಾಗಿ ಉರುಸ್ ಆಚರಿಸಲಾಗುವುದು. ರಾಜ್ಯ ಸೇರಿ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಇತರೆಡೆಯಿಂದ ಅಸಂಖ್ಯಾತ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಭಕ್ತರಿಗೆ ಸಮಸ್ಯೆ ಆಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.31ರಂದು ಸಂಜೆ 6.30ಕ್ಕೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಕಲಬುರಗಿಯ ಸೈಯ್ಯದ್ ಶಾ ಗೆಸುದರಾಜ್ ಖುಸ್ರೋ ಹುಸೇನಿ ಸಾಹೇಬ್, ಸೈಯ್ಯದ್ ಶಾ ಹಸನ್ ಶಬ್ಬೀರ್ ಹುಸೇನಿ ಸಾಹೇಬ್ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ಸಂಸ್ಥಾನದ ಡಾ.ಶರಣಬಸವಪ್ಪ ಅಪ್ಪ, ಹಲಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು, ನಾಲವಾರದ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ಅಬ್ಬೆತುಮಕೂರಿನ ಶ್ರೀ ಡಾ.ಗಂಗಾಧರ ಶಿವಾಚಾರ್ಯರು, ನಿರಗುಡಿಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಗಾಣಗಾಪುರದ ಶ್ರೀ ಆನಂದಮೂರ್ತಿ ಪ್ರಭುರಾಜ ದಂಡವತೆ ಮಹಾರಾಜ, ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಅಳ್ಳೊಳ್ಳಿಯ ಶ್ರೀ ಹಂಪಯ್ಯ ಸ್ವಾಮೀಜಿ, ಶ್ರೀ ನಾಗಪ್ಪಯ್ಯ ಸ್ವಾಮೀಜಿ, ಹಲಕರ್ಟಿಯ ಶ್ರೀ ರಾಜಶೇಖರ ಸ್ವಾಮೀಜಿ, ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು, ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಯಾದಗಿರಿ ಏಕದಂಡಗಿ ಮಠದ ಶ್ರೀ ಗುರುನಾಥ ಸ್ವಾಮೀಜಿ, ಸುಗೂರು (ಕೆ) ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಆ.1ರಂದು ಮಧ್ಯಾಹ್ನ ಹೈದರಾಬಾದ್‌ನಿಂದ ವಿಶೇಷ ರೈಲಿನ ಮೂಲಕ ವಾಡಿಗೆ ಗಂಧ (ಸಂದಲ್) ಆಗಮನ, 5.30ಕ್ಕೆ ವಾಡಿ ರೈಲು ನಿಲ್ದಾಣದಿಂದ ಹಲಕರ್ಟಿ ದರ್ಗಾವರೆಗೆ ಗಂಧದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ಸಾಮೂಹಿಕ ನಮಾಜ್, ನಂತರ ಧರ್ಮ ಗುರುಗಳಿಂದ ಧರ್ಮೋಪದೇಶ ಜರುಗಲಿದೆ. ಆ.2ರಂದು ಬೆಳಗ್ಗೆ 5.30ಕ್ಕೆ ದರ್ಗಾಕ್ಕೆ ಗಂಧ ಲೇಪನ, ಮಧ್ಯಾಹ್ನ 2.30ಕ್ಕೆ ಉಪನ್ಯಾಸ, ಸಂಜೆ 9ಕ್ಕೆ ದೀಪೋತ್ಸವ (ಚಿರಾಗ್) ಹಾಗೂ ರಾತ್ರಿ ಖವ್ವಾಲಿ ಗಾಯನ ನಡೆಯಲಿದೆ. ಆ.3ರಂದು ಮಧ್ಯಾಹ್ನ 2ಕ್ಕೆ ಖಿದ್ಮತ್ ಎ ಜಿಯಾರತ್ ಮತ್ತು 5.30ಕ್ಕೆ ಖುರಾನ್ ಪಠಣ, 10.30ರಿಂದ ರಾತ್ರಿಯಿಡೀ ಖವ್ವಾಲಿ ಗಾಯನ ನಡೆಯಲಿದೆ ಎಂದರು.