ಜಿಲ್ಲೆ

ಹರ್ಯಾಣ ಪೊಲೀಸರಿಂದ ಹೊನ್ನಾವರದ ಹ್ಯಾಕಿಂಗ್‌ ಕಿಂಗ್‌ ಅರೆಸ್ಟ್‌

ವಿಜಯವಾಣಿ ಸುದ್ದಿಜಾಲ ಹೊನ್ನಾವರ

ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಚಂದಾವರದ ಇಮಾಮ್ ಸಾಬ್ ಮುಲ್ಲಾ ಎಂಬ ಇಂಜನಿಯರ್ ನನ್ನು ಹರ್ಯಾಣದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹರ್ಯಾಣದ ಮಹಿಳೆಯೊಬ್ಬಳ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಅವರ ಫೋಟೋಗಳನ್ನು ಎಡಿಟ್ ಮಾಡಿ ಅವರ ಮೊಬೈಲ್ ಸಂಖ್ಯೆಯಿಂದಲೇ ಅವರ ಸ್ನೇಹಿತರಿಗೆ ಕಳುಹಿಸುತ್ತಿದ್ದ ಎನ್ನಲಾಗಿದೆ. ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹರ್ಯಾಣದ ಮಹಿಳೆಯ ಹಾಗೂ ಅಮೇರಿಕಾ ಮೂಲದ ಮಹಿಳೆಯೊಬ್ಬಳ ನಡುವೆ ಇರುವ ವೈಯಕ್ತಿಕ ದ್ವೇಷವಿತ್ತು. ಇದಕ್ಕಾಗಿ ಅಮೇರಿಕಾದ ಮಹಿಳೆಯು ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜನಿಯರ್ ಆಗಿರುವ ಚಂದಾವರದ ಇಮಾಮ್ ಸಾಬ್ ಮುಲ್ಲಾನನ್ನು ಪರಿಚಯ ಮಾಡಿಕೊಂಡು ಹರ್ಯಾಣದ ಮಹಿಳೆಯ ಚಾರಿತ್ರ್ಯಹರಣ ಮಾಡಲು ಈತನಿಗೆ ಸುಫಾರಿ ಕೊಟ್ಟಿದ್ದಳು. ಈತ ಹರ್ಯಾಣದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿದ್ದನು. ಇದರಿಂದ ಗಾಬರಿಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕಿ ಚಂದಾವರ ಮೂಲದ ಈ ವ್ಯಕ್ತಿಯ ಕೈವಾಡವನ್ನು ಪತ್ತೆ ಹಚ್ಚಿ ಹೊನ್ನಾವರದ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿಯಾಗಿದ್ದ ಇಮಾಮ್‌ ವರ್ಕ್‌ ಫ್ರಾಂ ಹೋಂನಡಿ ಊರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದ. ಎಥಿಕಲ್‌ ಹ್ಯಾಕಿಂಗ್‌ ಕಲಿತಿದ್ದ ಇಮಾಮ್‌ ಇನ್‌ ಎಥಿಕಲ್‌ ಕಾರ್ಯಗಳಿಗೆ ಕೈ ಹಾಕಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ