ಜಿಲ್ಲೆ

ಹರೀಶ್ ಕೊಲೆ ಪ್ರಕರಣ ಮರುತನಿಖೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ಹುಣಸೂರು ತಾಲೂಕಿನ ಹರವೆಯ ಎಚ್.ಸಿ.ಹರೀಶ್ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ, ಜಿಲ್ಲಾ ಮಡಿವಾಳ ಮಾಚೀದೇವರ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಮಡಿವಾಳ ಸಮಾಜದ ಎಚ್.ಸಿ.ಹರೀಶ್ ಕೊಲೆಯಾಗಿ 8 ತಿಂಗಳಾದರೂ ನ್ಯಾಯ ಸಿಕ್ಕಿಲ್ಲ. ಹತ್ಯೆಯ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹುಣಸೂರಿಗೆ ಮತ್ತೆ ಸ್ಥಳಾಂತರಗೊಂಡಿದ್ದು, ಅಮಾಯಕ ಜನರಿಗೆ ಬಡ್ಡಿ ಸಾಲ ನೀಡಿ ದಬ್ಬಾಳಿಕೆ ಮತ್ತೆ ಮುಂದುವರಿಸಿದ್ದಾನೆ.

ಇದೇ ಬಡ್ಡಿ ಸಾಲದ ವಿಷವೃತ್ತದಲ್ಲಿ ಸಿಲುಕಿ ಹರೀಶ್ ಸಹ ಕೊಲೆಯಾಗಿದ್ದಾರೆ ಎಂದು ದೂರಿದರು.

ಇದು ಯೋಜಿತ ಕೊಲೆಯಾಗಿದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಸಿರುವ ಈ ಪ್ರಕರಣವನ್ನು ಸಾಲಿಗ್ರಾಮದ ಪೊಲೀಸರು ಆತ್ಮಹತ್ಯೆ ಎಂದು ದಾಖಲಿಸಿಕೊಂಡು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.

ಈ ರೀತಿಯ ಪಕ್ಷಪಾತ ಧೋರಣೆಯಿಂದ ನ್ಯಾಯ ಮರೀಚಿಕೆಯಾಗಿದೆ. ಆದ್ದರಿಂದ ದಕ್ಷ ತನಿಖಾಧಿಕಾರಿಯನ್ನು ನಿಯೋಜಿಸಿ, ಮರು ತನಿಖೆ ನಡೆಸು ಮೂಲಕ ಮೃತ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಅಹಿಂದ ಜವರಪ್ಪ, ಹರಿಹರ ಆನಂದಸ್ವಾಮಿ, ದ್ಯಾವಪ್ಪ ನಾಯಕ, ಕೆ.ಎಸ್.ಶಿವರಾಮ್ ಸೇರಿದಂತೆ ಇದ್ದರು