ಹಾಸನ: ಎಂ.ಎಲ್.ಸಿ. ಹರಿಪ್ರಸಾದ್ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ ನೀಡುವುದರಲ್ಲಿ ವಿಶೇಷ ಏನಿದೆ, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರು ನಮ್ಮ ಮನೆಗೆ ಬರುತ್ತಾರೆ, ನಾನು ಪರಮೇಶ್ವರ್ ಮನೆಗೆ ಹೋಗ್ತಿನಿ. ಅದಕ್ಕೆ ರಾಜಕೀಯ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಶತ್ರು ಯಾರಿಲ್ಲ, ಮಿತ್ರನೂ ಯಾರು ಇರಲ್ಲ ಅನ್ನುವ ಹಾಗೇ ಇದು. ರಾಜಕಾರಣ ಯಾವಾಗಲೂ ಒಂದೇ ತರ ಇರಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ. ನಾನು ಮಂತ್ರಿ ಅಷ್ಟೇ. ಈ ಪ್ರಶ್ನೆನಾ ನಮ್ಮ ಹತ್ರ ಕೇಳಬಾರದು ಬೆಂಗಳೂರಿನಲ್ಲಿ ಕೇಳಿದರೇ ನಿಮ್ಮ ಉತ್ತರ ಅಲ್ಲಿ ಸಿಗುತ್ತದೆ ಎಂದು ಹೇಳಿದರು.
ಕನ್ನಡ ಭಾಷೆ ಬಗ್ಗೆ ನಟ ಕಮಲಹಾಸನ್ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈಗಾಗಲೇ ಬಹಳಷ್ಟು ಜನ ಹೇಳಿಕೆ ಕೊಟ್ಟಿದ್ದಾರೆ. ಅವರು ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಏನು ಹೇಳಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದರು.
ಶಿರಾಡಿ ಘಾಟ್ ಸಮಸ್ಯೆ ಇದೆ, ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮಣ್ಣು ಕುಸಿತ ಆಗಿದೆ. ಆದರೇ ಆ ರಸ್ತೆ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಕಳೆದ ಎರಡು ವರ್ಷಗಳಿಂದಲೂ ಇಲ್ಲಿಗೆ ಭೇಟಿ ಕೊಡಲಾಗುತ್ತಿದೆ. ಅಲ್ಲಿ ಏನು ಸ್ಥಿತಿಗತಿ ಇದೆ ನೋಡೋಣ! ರಾಜ್ಯ ವ್ಯಾಪ್ತಿಗೆ ಬರುವ ಕಾಮಗಾರಿಯಲ್ಲ. ರಾಷ್ಟ್ರವ್ಯಾಪ್ತಿಗೆ ಬರುತ್ತದೆ. ರಾಷ್ಟ್ರೀಯ ಹೈವೆಯವರು ಮಾಡುತ್ತಿದ್ದಾರೆ. ಅವರ ಜತೆ ಸೇರಿ ಕಾಮಗಾರಿ ಮಾಡಬೇಕಾಗುತ್ತದೆ. ಎಷ್ಟು ಬೇಗ ಕೆಲಸ ಮುಗಿಸುತ್ತಾರೆ ನೋಡೋಣ ಎಂದರು.
ಮಳೆ ಬಂದು ಇಲ್ಲಿ ಸಮಸ್ಯೆ ಆಗಿದ್ದರೂ ಸರ್ಕಾರಕ್ಕೆ ಮಳೆ ಬಂದಿರುವುದೇ ಗೊತ್ತಿಲ್ಲ, ಸಚಿವರು ಭೇಟಿ ಮಾಡಿಲ್ಲ ಎಂದು ವಿಫಕ್ಷ ನಾಯಕ ಆರ್. ಅಶೋಕ್ ಹೇಳಿಕೆ ಬಗ್ಗೆ ಉತ್ತರಿಸಿದ ಸಚಿವರು, ಶಿರಾಢಿಘಾಟ್ನಲ್ಲಿ ದೊಡ್ಡ ಅನಾಹುತ ಏನು ಆಗಿಲ್ಲ. ಆದರೂ ಕೂಡ ಇಲಾಖೆ ಅಧಿಕಾರಿಗಳು ವೀಕ್ಷಣೆ ಮಾಡಿದ್ದು, ಸಣ್ಣ ಪ್ರಮಾಣದಲ್ಲಿ ನಷ್ಟವಾಗಿದೆ. ನಾವು ಕೂಡ ಭೇಟಿ ಮಾಡುತ್ತಿದ್ದೇವೆ. ಯಾವುದೇ ಆರೋಪ ಮಾಡಿದರೇ ಯಾವ ಪ್ರಯೋಜನವಿಲ್ಲ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಇನ್ನು ಹೆಚ್ಚಿನ ಸೌಕರ್ಯ ಬೇಕೆಂದು ಪ್ರತಿಭಟನೆ ಮಾಡುತ್ತಿದ್ದು, ಅವರು ಕೇಳುವುದರಲ್ಲಿ ಅರ್ಥವಿದೆ. ಸರ್ಕಾರ ಅದಕ್ಕೆ ಪೂರಕವಾಗಿ ಸ್ಪಂದನೆ ಮಾಡುವ ನಿಟ್ಟಿನಲ್ಲಿ ನಾನು ಕೂಡ ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ ಎಂದು ಪೌರಕಾರ್ಮಿಕರ ಮುಷ್ಕರದ ಬಗ್ಗೆ ತಿಳಿಸಿದರು.
ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಷಯ. ಸರ್ಕಾರ ಅವರಿಗೆ ಗೌರವ ಕೊಡುವ ಬಗ್ಗೆ ಚಿಂತನೆ ಮಾಡುತ್ತಿದೆ ಎಂದರು.
ಇದೆ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ. ಸುರೇಶ್, ಸಿಮೆಂಟ್ ಮಂಜು ಇತರರು ಉಪಸ್ಥಿತರಿದ್ದರು.