ಬಾಗಲಕೋಟೆ: ಉತ್ತರ ಭಾರತದಲ್ಲಿ ಮೇಘ ಸ್ಪೋಟ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಅಮರನಾಥ ಹಾಗೂ ಹರಿದ್ವಾರ ಯಾತ್ರೆಗೆ ತೆರಳಿರುವ ಯಾತ್ರಿಗಳು ಸುರಕ್ಷವಾಗಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಮಹಾಲಿಂಗಪುರ ಹಾಗೂ ಕಮತಗಿ ಪಟ್ಟಣಗಳು ಜನರು ಯಾತ್ರೆಗೆ ತೆರಳಿದ್ದು, ಅಲ್ಲಿ ಯಾವುದೇ ಅಪಾಯಕ್ಕೆ ಸಿಲುಕದ ಸುರಕ್ಷಿತ ಸ್ಥಳದಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದು, ಅಲ್ಲಿ ತಾವು ಸೇಫ ಆಗಿರುವ ಬಗ್ಗೆ ಪೋಟೋಗಳನ್ನು ಸಹ ಕುಟುಂಬದವರಿಗೆ ಕಳುಹಿಸಿದ್ದಾರೆ.
ರಬಕವಿ-ಬನಹಟ್ಟಿ ಪಟ್ಟಣದ ಮಲ್ಲಪ್ಪ ಭಾವಿಕಟ್ಟಿ, ಬಸವರಾಜ್ ಬಂಡಿವಡ್ಡರ, ಸಂಜು ಜಮಖಂಡಿ, ಶಂಕರ್ ಪಾತ್ರೋಟ ಅವರು ಅಮರನಾಥ ಯಾತ್ರೆಗೆ ಜುಲೈ ೩ ರಂದು ಕುಡಚಿಯಿಂದ ರೈಲ್ವೆ ಮುಖಾಂತರ ತೆರಳಿದ್ದರು. ಇವರೊಂದಿಗೆ ಬೆಳಗಾವಿ ಜಿಲ್ಲೆಯ ಮಹಾಲಿಂಗ ನೀಲಣ್ಣವರ ಹಾಗೂ ಯೋಧ ಮಹಾದೇವಪ್ಪ ತಳ್ಳಿ ಸಹ ಇದ್ದು, ಎಲ್ಲರೂ ಸುರಕ್ಷವಾಗಿ ಇರುವುದಾಗಿ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅಮರನಾಥ ಯಾತ್ರೆಯ ಮಧ್ಯ ಡೊಮಾಲ್ ನ ವಿಶಾಲ್ ಭಂಡಾರ ಶಿವ ಆಶ್ರಮದಲ್ಲಿ ವಾಸ್ತವ್ಯ ಮಾಡಿದ್ದು, ಆ್ರಮದಲ್ಲಿ ಊಟ, ವಸತಿ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿಸಿದ್ದಾರೆ. ತಾವು ಸುರಕ್ಷವಾಗಿದ್ದು, ತಾವು ಇರುವ ಜಾಗದಿಂದ ಅಮರನಾಥ ದರ್ಶನ ೫-೬ ಕಿ.ಮೀ. ಅಂತರ ಇದೆ. ಮತ್ತೆ ಯಾತ್ರೆಗೆ ಅವಕಾಶ ಸಿಗಲಿದ್ದು, ಯಾವುದೇ ತೊಂದರೆ ಇಲ್ಲ ಎಂದು ತಮ್ಮ ಕುಟುಂಬದವರಿಗೆ ಫೋನ ಮಾಡಿ ತಿಳಿಸಿದ್ದಾರೆ.
ಇನ್ನು ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಮೂವರು ಯಾತ್ರಿಗಳು ಚಾರ್ ಧಾಮ್ ಯಾತ್ರೆಗೆ ತೆರಳಿದ್ದು, ಅವರೆಲ್ಲ ಹರಿದ್ವಾರದಲ್ಲಿ ಸುರಕ್ಷವಾಗಿ ಇರುವುದಾಗಿ ವಿಜಯವಾಣಿ ಮೂಲಕ ತಿಳಿಸಿದ್ದಾರೆ. ಪಟ್ಟಣದ ದೇವೇಂದ್ರಪ್ಪ ಬಂಡಿ, ಮಲ್ಲಪ್ಪ ದಂಡಾವತಿ, ಗುರುಪಾದಪ್ಪ ಲಾಯಲಗುಂದಿ ಎನ್ನುವವರು ಕಳೆದ ಶುಕ್ರವಾರ ಬಾಗಲಕೋಟೆಯಿಂದ ಹರಿದ್ವಾರಕ್ಕೆ ತೆರಳಿದ್ದರು.
ಹರಿದ್ವಾರದಲ್ಲಿ ಮಳೆ ಆಗಿದ್ದು, ಯಾವುದೇ ತೊಂದರೆ ಉಂಟಾಗಿಲ್ಲ. ಹರಿದ್ವಾರದ ಗುಜರಾತಿ ಶ್ಯಾಮ್ ಛತ್ರದಲ್ಲಿ ತಂಗಿದ್ದೇವೆ. ಚಾರ್ ಧಾಮ್ ಬಳಿಕ ಅಮರನಾಥ ದರ್ಶನ ಪಡೆದುಕೊಂಡು ವಾಘಾ ಬಾರ್ಡರ್ ಗೆ ತೆರಳಲಿದ್ದೇವೆ ಎಂದು ದೇವೇಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ.
ದೇವೇಂದ್ರಪ್ಪ ಅವರು ಕಳೆದ ವರ್ಷ ಜುಲೈ ತಿಂಗಳಲ್ಲಿ ಸಹ ಉತ್ತರ ಭಾರತದ ಧಾರ್ಮಿಕ ಸ್ಥಳಗಳಿಗೆ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲೂ ಮೇಘಸ್ಪೋಟ ಉಂಟಾಗಿ ಅಲ್ಲಿ ಸಂಕಷ್ಟ ಎದುರಿಸಿದ್ದರು. ಬಳಿಕ ಸುರಕ್ಷವಾಗಿ ಊರಿಗೆ ಆಗಮಿಸಿದ್ದರು. ಈ ಸಲವೂ ಮತ್ತೆ ಚಾರ್ ಧಾಮ್ ಯಾತ್ರೆಗೆ ತೆರಳಿದ್ದು, ಯಾವುದೇ ಅಪಾಯ ಇಲ್ಲದೇ ಸುರಕ್ಷವಾಗಿದ್ದೇವೆ. ೯ ದಿನಗಳ ಯಾತ್ರೆ ಇದ್ದು, ಪೂರ್ಣಗೊಳಿಸಿ ಬರುತ್ತೇವೆ. ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.