ಬಾಗಲಕೋಟೆ: ಬಾದಾಮಿ ಬನಶಂಕರಿ ದೇವಿ ದೇವಸ್ಥಾನದ ಎದುರಿಗೆ ಇರುವ ಹರಿದ್ರಾ ತೀರ್ಥ ಸಂಪೂರ್ಣ ಖಾಲಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರೆಯ ವೇಳೆ ಹೊಂಡ ಖಾಲಿ ಆಗಿದ್ದರೂ ನವೀಲು ತೀರ್ಥದಿಂದ ನೀರು ಹರಿಸಿ ತುಂಬಿಸುತ್ತಿದ್ದರು.
ಸಿದ್ದರಾಮಯ್ಯ ಅವರು ಬಾದಾಮಿ ಶಾಸಕರಾಗಿದ್ದ ವೇಳೆ ಭಕ್ತರು ಹಾಗೂ ದೇವಸ್ಥಾನದ ಕಮೀಟಿಯವರ ಮನವಿಯಂತೆ ಬೆಳಗಾವಿ ಆಯುಕ್ತರಿಗೆ ಹೇಳಿ ನೀರು ಬಿಡಿಸುತ್ತಿದ್ದರು. ಹೀಗಾಗಿ ಅವರು ಇದ್ದಾಗ ನೀರಿನ ಸಮಸ್ಯೆ ಆಗಿರಲಿಲ್ಲ. ಈ ವರ್ಷ ಹರಿದ್ರಾ ತೀರ್ಥ ಖಾಲಿಖಾಲಿ ಆಗಿದೆ, ಸರಸ್ವತಿ ಹಳ್ಳವೂ ಸಂಪೂರಗಣ ಬರಿದಾಗಿದೆ. ಇದರಿಂದ ಜಾತ್ರೆಗೆ ಬಂದು ವಾಸ್ತವ್ಯ ಮಾಡುವ ಅನೇಕ ಭಕ್ತರಿಗೆ ನೀರಿಲ್ಲದೇ ಪುಣ್ಯ ಸ್ನಾನಕ್ಕೂ ಕುತ್ತು ತಂದಿದೆ. ಇದು ಭಕ್ತರಿಗೆ ಬಹಳಷ್ಟು ಬೇಸರ ತಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡು ಹೊಂಡಕ್ಕೆ ನೀರು ಬಿಡಿಸಬೇಕಿತ್ತು ಎಂದು ಜಾತ್ರೆಗೆ ಬಂದಿದ್ದ ಅನೇಕ ಭಕ್ತರು ಹೇಳುತ್ತಿದ್ದ ದೃಶ್ಯ ಕಂಡು ಬಂದಿತು.
ಮೊಳಗಿದ ಜೈಶ್ರೀರಾಮ, ಜೈ ಮೋದಿ ಘೋಷಣೆ :
ಈ ವರ್ಷ ಬನಶಂಕರಿ ಜಾತ್ರೆಯ ಮಹಾರಥೋತ್ಸವದ ವೇಳೆ ವಿಶೇಷವಾಗಿ ಜೈ ಶ್ರೀರಾಮ ಘೋಷಣೆ ಮೊಳಗಿದವು. ಮೂರು ದಿನಗಳ ಹಿಂದಷ್ಟೆ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಆಗಿದ್ದು, ಎಲ್ಲೆಡೆ ರಾಮನಾಮ ಜಪ ಕಂಡು ಬಂದಿತ್ತು. ಇವತ್ತು ಬನಶಂಕರಿ ದೇವಿ ದರ್ಶನಕ್ಕೆ ಸಾಲಿನಲ್ಲಿ ನಿಂತಿದ್ದ ಭಕ್ತರು ಶಂಭುಕೋ ಘೋಷಣೆ ಜೊತೆಗೆ ಜೈ ಶ್ರೀರಾಮ ಜೈಶ್ರೀರಾಮ ಘೋಷಣೆ ಹಾಕುತ್ತಿದ್ದರು. ಸಂಜೆ ರಥೋತ್ಸವ ವೇಳೆ ಜೈಶ್ರೀರಾಮ ಘೋಷಣೆ ಜೊತೆಗೆ ಜೈ ಮೋದಿ ಘೋಷಣೆಗಳು ಪ್ರತಿಧ್ವನಿಸಿದವು.