ಚಿಕ್ಕಮಗಳೂರು: ಬಿಜೆಪಿ ತನ್ನ ಮೂಲ ಸಿದ್ಧಾಂತವನ್ನು ಜನರಿಗೆ ತಿಳಿಸುತ್ತಿಲ್ಲ. ಬಿಜೆಪಿ ಮೂಲ ಸಿದ್ದಾಂತದ ಪ್ರಕಾರ ಹರಿಜನರು ಹಿಂದುಗಳೋ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಾಜಿ ಸಚಿವ ಕಿಮ್ಮನ ರತ್ನಾಕರ್ ಸವಾಲು ಹಾಕಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಹರಿಜನರು ಹಿಂದುಗಳಲ್ಲ ಎಂಬ ಉಲ್ಲೇಖ ಮಾಡಿದ್ದಾರೆ. ಈ ಪುಸ್ತಕವೇ ಅವರ ಪರಮೋಚ್ಚ ಪುಸ್ತಕವಾಗಿದೆ. ಈ ಬಗ್ಗೆ ಬಿಜೆಪಿಯವರು ಮಾತನಾಡಲಿ, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಬಿಜೆಪಿ ತನ್ನ ಮೂಲ ಸಿದ್ಧಾಂತವನ್ನು ಜನರಿಗೆ ಹೇಳುತ್ತಿಲ್ಲ. ದೇಶದಲ್ಲಿ 19 ಸಾವಿರ ಭಾಷೆ 4 ಸಾವಿರ ಜಾತಿ ಹಾಗೂ ಒಂಭತ್ತಕ್ಕೂ ಹೆಚ್ಚು ಧರ್ಮಗಳಿವೆ. ಆದರೆ ಪ್ರಾಂತಿಯ ಭಾಷೆಗಳನ್ನು ಅಳಿಸುವ ಪ್ರಸ್ತಾಪವೂ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಜಾತಿ ಧರ್ಮದವರು ಒಂದಾಗಿ ಬದುಕಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿಯ ಈ ಪುಸ್ತಕದಲ್ಲಿ ಒಂದು ದೇಶ, ಒಂದು ಆಡಳಿತ, ಒಂದು ಭಾಷೆ ಎಂದು ಹೇಳುತ್ತಾರೆ. ಸಂಸ್ಕೃತ ಪ್ರಮುಖ ಭಾಷೆಯಾದರೆ, ಹಿಂದಿ ಸಂವಹನ ಭಾಷೆಯಾಗಬೇಕು ಎಂದು ಇದೇ ಪುಸ್ತಕದಲ್ಲಿ ಹೇಳಲಾಗಿದೆ. ಇದು ಸ್ಥಳೀಯ ಯಾವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ತಿಳಿದಿಲ್ಲ. ಹೀಗಾಗಿ ನಾನು ಸ್ಥಳೀಯ ಬಿಜೆಪಿ ಮುಖಂಡರ ಬಗ್ಗೆ ಮಾತನಾಡುವುದಿಲ್ಲ ಎಂದರು.
ವಿಶ್ವಗುರು ಎಂಬ ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿದೆ. ಏಕಾಏಕಿ ವಿಶ್ವಗುರು ಎಂಬ ಪದ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ವಿಶ್ವಗುರು ಎಂಬ ಉಲ್ಲೇಖವು ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿದೆ. ನವಿಲಿಗೆ ಕಾಳು ಹಾಕುವುದು ಸೇರಿದಂತೆ ಹಲವು ವಿಚಾರಗಳು ಇದೇ ಪುಸ್ತಕದಲ್ಲಿವೆ. ಈ ಬಗ್ಗೆ ಚರ್ಚೆಗೆ ಯಾವುದೇ ಬಿಜೆಪಿ ಮುಖಂಡರು ಮುಂದೆ ಬರುವುದಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಜೊತೆಗೆ ಮಾತ್ರ ಸಂವಾದ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತ ಪ್ರಜಾಪ್ರಭುತ್ವ ದೇಶ. ಆದರೆ ಭಾರತಕ್ಕೆ ಸ್ವತಂತ್ರ ಬಂದು 52 ವರ್ಷದವರೆಗೂ ಆರ್ ಎಸ್ ಎಸ್ ತನ್ನ ಕೇಂದ್ರ ಕಚೇರಿ ನಾಗಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಇನ್ನು ವಿಶೇಷ ಎಂದರೆ ಆರ್ ಎಸ್ ಎಸ್ ಗೆ ಇದುವರೆಗೆ ಚುನಾವಣೆಯೇ ನಡೆದಿಲ್ಲ. ಹೀಗಿರುವಾಗ ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ಹಾಸ್ಯಸ್ಪದವಾಗಿದೆ ಎಂದು ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾಯಣ ರಾವ್, ಹನೀಫ್, ಹಿರೇಗೌಜ ಶಿವಕುಮಾರ್, ಪ್ರವೀಣ್ ಬೆಟಗೆರೆ ಮತ್ತಿತರರಿದ್ದರು.