ಚಿಕ್ಕಬಳ್ಳಾಪುರ : ಹಣ, ಆಮಿಷೆಗಳಿಗೆ ಒಳಗಾಗಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ಪ್ರಕರಣಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜತೆಗೆ ಅಂತಹ ಸದಸ್ಯ ಸ್ಥಾನಗಳನ್ನು ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಗ್ರಾಪಂ ಚುನಾವಣಾ ಪೂರ್ವ ಸಿದ್ಧತೆಯ ಸಭೆಯಲ್ಲಿ ಮಾತನಾಡಿ, ರಾಜ್ಯದ ಕೆಲವು ಕಡೆ ಸದಸ್ಯ ಸ್ಥಾನಗಳನ್ನು ಹರಾಜು ಮೂಲಕ ಆಯ್ಕೆ ಮಾಡುವುದು ಕಂಡುಬಂದಿದೆ. ಇದು ಕಾನೂನು ಬಾಹಿರವಾದುದು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುವ ಜತೆಗೆ ಆಯ್ಕೆಯಾದ ವ್ಯಕ್ತಿಯ ಸ್ಥಾನವನ್ನು ಅಸಿಂಧುಗೊಳಿಸಲು ಆಯೋಗಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು. ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆಯನ್ನು ಬಳಸುವಂತಿಲ್ಲ, ಯಾವುದೇ ಅಭ್ಯರ್ಥಿಯಾಗಲಿ, ಪಕ್ಷದ ಕಾರ್ಯಕರ್ತರಾಗಲಿ, ಸಾರ್ವಜನಿಕರಾಗಲಿ ಪಕ್ಷದ ಚಿಹ್ನೆ ಅಥವಾ ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಇಟ್ಟುಕೊಂಡು ಮತ ಕೇಳುವುದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಈ ಬಗ್ಗೆ ಎಂಸಿಸಿ ತಂಡವು ಜಾಗೃತವಾಗಿರಬೇಕು ಎಂದು ಡಿಸಿ ಸೂಚಿಸಿದರು. ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. 60 ಸ್ಥಾನಗಳಿಗೆ ಅವಿರೋಧ ಆಯ್ಕೆ ಮೊದಲ ಹಂತದಲ್ಲಿ 84 ಗ್ರಾಮ ಪಂಚಾಯಿತಿಗಳ 1348 ಸ್ಥಾನಗಳ ಪೈಕಿ ಒಟ್ಟು 60 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ, ಈ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ 22, ಶಿಡ್ಲಘಟ್ಟದಲ್ಲಿ 22 ಮತ್ತು ಚಿಂತಾಮಣಿಯಲ್ಲಿ 16 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವಿರೋಧ ಆಯ್ಕೆಯಾದ ಸದಸ್ಯ ಸ್ಥಾನಗಳು ಕ್ರಮಬದ್ಧವಾಗಿವೇ ಎಂಬುದು ಉಪವಿಭಾಗಾಧಿಕಾರಿಗಳಿಂದ ಪರಿಶೀಲನೆ ಮಾಡಿ ದೃಢಪಡಿಸಲಾಗಿದೆ ಎಂದು ತಿಳಿಸಿದರು. ಕರೊನಾ ಸೋಂಕಿತರಿಗೆ ಅವಕಾಶ ಕೋವಿಡ್-19 ಪಾಸಿಟಿವ್ ಬಂದಿರುವ ವ್ಯಕ್ತಿಗಳು ಅಥವಾ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ಮತದಾನ ಮುಗಿಯುವ ಒಂದು ಗಂಟೆ ಮುಂಚಿತವಾಗಿ ಮತಗಟ್ಟೆಗೆ ಬಂದು ಮತ ಹಾಕಬಹುದು. ಇದಕ್ಕೂ ಮುನ್ನ ಸೋಂಕಿತ ಲಿಖಿತ ಅರ್ಜಿಯ ಮೂಲಕ ಆಯಾ ಭಾಗದ ಆರ್‌ಒಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದರು.
ಪೊಲೀಸ್ ಇಲಾಖೆ ಹಾಗೂ ಅಬಕಾರಿ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಮತ್ತು ದಾಸ್ತಾನು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಟ್ಟು 144 ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ ಅಬಕಾರಿ ಇಲಾಖೆಯಿಂದ 64 ಹಾಗೂ ಪೊಲೀಸ್ ಇಲಾಖೆ 80 ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ 730 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ