ಮೂಡಿಗೆರೆ: ಕಾಫಿ ಬೆಳೆಗಾರರ ಬ್ಯಾಂಕಿನ ಸಾಲವನ್ನು ಶೇ.4 ರಿಂದ 6ವರೆಗಿನ ಕಡಿಮೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಲು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಅವಕಾಶ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿರುವುದರಿಂದ ಸಾಲ ಮರುಪಾವತಿ ಮಾಡಲು ಅನುಕೂಲವಾಗಲಿದೆ. ಸಾಲದ ನೆಪದಲ್ಲಿ ಬ್ಯಾಂಕ್‌ಗಳು ಕಾಫಿ ತೋಟವನ್ನು ಹರಾಜು ಹಾಕುವುದನ್ನು ತಪ್ಪಿಸಬಹುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.
ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಕೆವಿಕೆಯಿಂದ ಶುಕ್ರವಾರ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳೆಗಾರರು ಬ್ಯಾಂಕಿನಲ್ಲಿ ಮಾಡಿದ ಸಾಲಕ್ಕೆ ಕಾಫಿ ಮಂಡಳಿ ಜವಾಬ್ದಾರಿಯಲ್ಲ. ಅನೇಕ ತೋಟಗಳು ಹರಾಜಿಗೆ ಬಂದಿರುವ ಕಾರಣ ಅಂಥ ತೋಟಗಳನ್ನು ಬೆಳೆಗಾರರಿಗೆ ಉಳಿಸಿಕೊಡುವುದು ನಮ್ಮೆಲ್ಲರ ವೈಯಕ್ತಿಕ ಜವಾಬ್ದಾರಿ. ಹಾಗಾಗಿ ಕೇಂದ್ರ ಸಚಿವರು ಹಾಗೂ ಬ್ಯಾಂಕ್ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಕಾಫಿಗೆ ಅತ್ಯುತ್ತಮ ಬೆಲೆ ಬಂದಿರುವ ಕಾರಣ ಬೆಳೆಗಾರರು ವಾರ್ಷಿಕ ಆದಾಯದಲ್ಲಿ ಶೇ.70 ಹಣವನ್ನು ಕಾಫಿ ತೋಟದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.
ಗುಣಮಟ್ಟದ ಕಾಫಿಗೆ ಮಾತ್ರ ವಿದೇಶದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಗುಣಮಟ್ಟದ ಕಾಫಿಯನ್ನು ವಿದೇಶಕ್ಕೆ ರಫ್ತು ಮಾಡಿ ಉಳಿದ ಕಾಫಿಯನ್ನು ಭಾರತದಲ್ಲಿ ಬಳಸಲಾಗುತ್ತದೆ. ಇಂಥ ಕಾರ್ಯ ಆಗಬಾರದು. ಗುಣಮಟ್ಟದ ಕಾಫಿಯನ್ನು ಬೆಳೆಯಲು ಪ್ರಯತ್ನಿಸಿದರೆ ಉತ್ತಮ ಇಳುವರಿ ಕೂಡ ಬರಲಿದೆ. ಗುಣಮಟ್ಟದ ಕಾಫಿಗೆ ಇನ್ನಷ್ಟು ಬೆಲೆ ಹೆಚ್ಚಿ ರೈತರ ಆದಾಯ ಕೂಡ ಹೆಚ್ಚಾಗಲಿಗೆ ಎಂದು ತಿಳಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಕಾಫಿ ಬೆಳೆಗೆ ಸಹಾಯಧನಕ್ಕಾಗಿ ಕಾಫಿ ಮಂಡಳಿಗೆ 21 ಸಾವಿರ ಬೆಳೆಗಾರರು ಮಂಡಳಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಹಾಯಧನ ನೀಡಲು 195 ಕೋಟಿ ರೂ. ಬೇಕಾಗಿದೆ. ಮಂಡಳಿಯಲ್ಲಿ 95 ಕೋಟಿ ಮಾತ್ರ ಇದೆ. ಇನ್ನೂ 100 ಕೋಟಿ ಅಗತ್ಯವಿದೆ. ಅಷ್ಟೂ ಹಣವನ್ನು ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಪರ ನಿಂತಿದೆ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಬೆಳೆ ರಫ್ತು ಮತ್ತು ಆಮದು ಮಾಡಲು ಸರಳವಾದ ವ್ಯವಸ್ಥೆ ಮಾಡಿದ್ದರಿಂದ ಬೆಳೆಗೆ ನ್ಯಾಯವಾದ ಬೆಲೆ ಸಿಗುತ್ತಿದೆ. ಅವರು ಪ್ರಧಾನಿಯಾಗಿದ್ದಾಗ ಕೃಷಿಗೆ ದೇಶದಲ್ಲಿ ಹೆಚ್ಚು ಒತ್ತು ನೀಡಿದ್ದಾರೆ. ಗ್ಯಾಟ್, ಡಬ್ಲುೃಟಿಒ ಒಪ್ಪಂದದಿಂದ ಭಾರತವನ್ನು ವಿದೇಶಿ ಪ್ರಜೆಗಳು ತಿರುಗಿ ನೋಡುವಂತೆ ಮಾಡಿದ್ದರು. ಭಾರತವನ್ನು ಪ್ರಪಂಚಕ್ಕೆ ಪರಿಚಯಿಸಿ ಅತ್ಯುತ್ತಮ ರಾಷ್ಟ್ರವನ್ನಾಗಿ ರೂಪಿಸಿದ್ದರು. 1990ರಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಕ್ಷೀಣಿಸಿತ್ತು. ಅದನ್ನು ಮೇಲಕ್ಕೆ ಎತ್ತಿದವರು ಮನಮೋಹನ್ ಸಿಂಗ್. ಆರ್ಥಿಕ ಪರಿಸ್ಥಿತಿಯನ್ನು ಪುನಶ್ಚೇತನಗೊಳಿಸಿ ಮುಂದಿನ 100 ವರ್ಷದವರೆಗೂ ದೇಶ ಅಭಿವೃದ್ಧಿ ಕಾಣಬಲ್ಲ ಅತ್ಯುತ್ತಮ ಆಡಳಿತ ನೀಡಿದ್ದರು ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಗುಣಗಾನ ಮಾಡಿದರು.
ಕೃಷಿಮೇಳ ನಡೆದ ಪರಿಸರದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಉದ್ದಿಮೆದಾರರ 115 ಮಳಿಗೆಗಳನ್ನು ತೆರೆಗೆಯಲಾಗಿತ್ತು. ವಿವಿಧ ರೀತಿಯ ಗಿಡಗಳು, ಕೃಷಿ ಯಂತ್ರೋಪಕರಣ, ವಿವಿಧ ಬಿತ್ತನೆ ಬೀಜಗಳು, ಮೀನು, ಕುರಿ, ಕೋಳಿ ಸಾಕಣೆ, ಹೈನುಗಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ, ಕಾಂಪೋಸ್ಟ್ ಗೊಬ್ಬರ ತಯಾರಿಸುವ ಮತ್ತು ಬೆಳೆಗಳಿಗೆ ಬಳಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಸೇರಿದಂತೆ ವಿವಿಧ ರೀತಿಯ ಮಳಿಗೆಗಳಿಂದ ರೈತರು ಪ್ರಯೋಜನ ಪಡೆದರು.
ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನಿಧನರಾದ ಹಿನ್ನೆಲೆಯಲ್ಲಿ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು. ಆರಂಭದಲ್ಲಿ ಮೌನಾಚರಿಸಿ ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತ, ಪ್ರಾರ್ಥನೆ, ಪ್ರಾಸ್ತಾವಿಕ ನುಡಿ, ವಂದನಾರ್ಪಣೆ, ಪ್ರಗತಿಪರ ಕೃಷಿಗಳಿಗೆ ಸನ್ಮಾನ, ವಿದ್ಯಾರ್ಥಿಗಳಿಂದ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವನ್ನೂ ರದ್ದುಪಡಿಸಲಾಯಿತು. ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ನೀಡಲು ಕಾರ್ಯಕ್ರಮ ಸೀಮಿತಗೊಳಿಸಲಾಯಿತು.
ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶ್ರೀನಿವಾಸ್, ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ, ಕೃಷಿ ಸಂಶೋಧನಾ ನಿರ್ದೇಶಕ ಡಾ. ದುಷ್ಯಂತ್‌ಕುಮಾರ್, ಡಾ. ಗುರುಮೂರ್ತಿ, ಡಾ. ಹೇಮ್ಲಾನಾಯಕ್, ಡಾ. ಉಲ್ಲಾಸ್, ಹಳಸೆ ಶಿವಣ್ಣ, ಬಿ.ಎಸ್.ಜಯರಾಮ್, ಬಿ.ಆರ್.ಬಾಲಕೃಷ್ಣ, ಪಿ.ಕೆ.ನಾಗೇಶ್, ವನಶ್ರೀ ಲಕ್ಷ್ಮಣಗೌಡ, ಕೆ.ಆರ್.ಕೇಶವ, ಡಿ.ರಂಜಿತಾ, ಸ್ವಾತಿಶ್ರೀ ಇತರರಿದ್ದರು.