ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಕೋಟೆನಾಡಿನಾದ್ಯಂತ ಪ್ರತಿಷ್ಠಾಪಿಸಿದ್ದ ಸಾವಿರಾರು ಸಾರ್ವಜನಿಕ ಮೂರ್ತಿಗಳ ಪೈಕಿ 888 ಮೂರ್ತಿಗಳನ್ನು ಮೂರನೇ ದಿನವಾದ ಸೋಮವಾರ ವಿಸರ್ಜಿಸುವ ಮೂಲಕ ಸಂಘಟಕರು ಗಣೇಶೋತ್ಸವ ಸಂಪನ್ನಗೊಳಿಸಿದರು. ಈ ವೇಳೆ ಹರಪುತ್ರ ವಿನಾಯಕನಿಗೆ ಜಯಘೋಷ ಮೊಳಗಿಸಿದರು…
ಮಂಗಳವಾರ ಕೂಡ 38 ಮೂರ್ತಿ ವಿಸರ್ಜಿಸಲಾಯಿತು. ಮಂಟಪಗಳಲ್ಲಿ ಪ್ರತಿಷ್ಠಾಪಿಸಿದ್ದ ಸ್ವಾಮಿಯ ಮೂರ್ತಿಗಳಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರೆ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಜಿಲ್ಲೆಯ ನಗರ, ಪಟ್ಟಣ, ವಿವಿಧ ಗ್ರಾಮಗಳು ಒಳಗೊಂಡು ವಿವಿಧೆಡೆ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಸ್ವಾಮಿಯ ಪೂಜಾ ಕಾರ್ಯಕ್ಕೆ ಸಹಕರಿಸಿದ ಅನೇಕರ ಮನೆಗಳಿಗೆ ಪ್ರಸಾದ ತಲುಪಿಸುವಲ್ಲೂ ಸಂಘಟಕರು ಮುಂದಾದರು.
ಸಂಜೆ 4ರ ನಂತರ ಟ್ರ್ಯಾಕ್ಟರ್‌ನೊಳಗೆ ಅಲಂಕೃತ ವಿವಿಧ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಬೃಹತ್ ಹೂವಿನ ಹಾರಗಳನ್ನಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಸಂಭ್ರಮದಿಂದಲೇ ಕಳುಹಿಸಿಕೊಡುವಲ್ಲಿ ಯುವಕರ ಉತ್ಸಾಹ ಇಮ್ಮಡಿಗೊಂಡಿತ್ತು.
ಬಿಗಿ ಪೊಲೀಸ್ ಭದ್ರತೆ: ಪಟಾಕಿ ಸಿಡಿಸಿ, ವಿವಿಧ ವರ್ಣದ ಕಾಗದಗಳ ಸುರಿಮಳೆಗೈದು ಸ್ವಾಮಿಯನ್ನು ಮಾರ್ಗಗಳಲ್ಲಿ ಸ್ವಾಗತಿಸಲಾಯಿತು. ಡೊಳ್ಳು, ಉರುಮೆ, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ಯುವಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ವಿಸರ್ಜನಾ ಕಾರ್ಯ ನೆರವೇರಿತು. ಮೆರವಣಿಗೆ ಅಂಗವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.