ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಚನ್ನಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣ ನೆರವೇರಿಸಿದ ಅಪ್ರವರಂಭೆ ರಂಗತಂಡದ ಸಂಸ್ಥಾಪಕ ನಾ.ನಾಗಚಂದ್ರ ಮಾತನಾಡಿ, ಬ್ರಿಟಿಷರು ಭಾರತಕ್ಕೆ 250 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಬಂದರು. ಬಂದವರು ಇಡೀ ದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ನಮ್ಮನ್ನು ಗುಲಾಮರಾಗಿಸುವ ಮೂಲಕ ನಮಗೆ ಯಾವುದೇ ಸ್ವಾತಂತ್ರ್ಯ ನೀಡದೇ ವಂಚನೆ ಮಾಡಿದರು. ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತ್ಯಾಗದ ಹೋರಾಟ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.
ಸಾನ್ನಿಧ್ಯ ವಹಿಸಿದ್ದ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಹರವೆ ವಿರಕ್ತ ಮಠಾಧೀಶ ಶ್ರೀ ಸರ್ಪಭೂಷಣ ಸ್ವಾಮೀಜಿ ಅಂಬೇಡ್ಕರ್, ಮಹಾತ್ಮ ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ವಿದ್ಯಾರ್ಥಿಗಳು ದೇಶಭಕ್ತರ ವಿವಿಧ ವೇಷ ಧರಿಸಿ ಗಮನಸೆಳೆದರು.
ಚನ್ನಬಸವೇಶ್ವರ ಪ್ರತಿಷ್ಠಾನದ ಕಾರ್ಯದರ್ಶಿ ಎಚ್.ಎಸ್.ಗಿರೀಶ್, ಬೆಂಗಳೂರು ಮೆಕಾನಿಕಲ್ ಇಂಜಿನಿಯರ್ ಮಹದೇವಸ್ವಾಮಿ, ಸಿವಿಲ್ ಇಂಜಿನಿಯರ್ ಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್, ಮುಖ್ಯ ಶಿಕ್ಷಕ ರಾಜು, ಸಹಶಿಕ್ಷಕರು ಹಾಜರಿದ್ದರು.