ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ಬಂಡಾಯಗಳಲ್ಲಿ ಕನ್ನಡಿಗರ ದೇಶಭಕ್ತಿ, ಸ್ವಾತಂತ್ರೃ ಪ್ರಿಯತೆ ಅನನ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ನಗರದ ವನಿತಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ನಡೆದ ಬಂಡಾಯಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಿಷರ ವಿರುದ್ಧ ನಡೆದ ಬಂಡಾಯಗಳಲ್ಲಿ ಕನ್ನಡದ ಹೋರಾಟಗಾರರು ತಮ್ಮ ಜೀವಕ್ಕಿಂತ ಸ್ವಾತಂತ್ರೃ ಹೆಚ್ಚು ಮೌಲ್ಯವಾದದ್ದು ಎಂದು ನಂಬಿದ್ದರು. ಅವರ ತ್ಯಾಗ, ಸ್ವಾತಂತ್ರೃ ಪ್ರಿಯತೆ ವಿದ್ಯಾರ್ಥಿಗಳಿಗೆ ಚೇತೋಹಾರಿಯಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ವೀಣಾ ಬಿರಾದಾರ ಉಪನ್ಯಾಸ ನೀಡಿ, ಕನ್ನಡದ ಸ್ವಾತಂತ್ರೃ ಹೋರಾಟದ ಬಂಡಾಯಗಾರರು ಸ್ವಾಭಿಮಾನದ ಪ್ರತೀಕವಾಗಿದ್ದರು. 1800-1867ರವರೆಗೆ ಬ್ರಿಟಿಷರ್ ದುರಾಡಳಿತದ ವಿರುದ್ಧ ಬಂಡಾಯವೆದ್ದ ಮೊದಲಿಗರೆಂದರೆ ದೊಂಡಿಯಾ ವಾಘ, ನಂತರ ಹಲಗಲಿ ಬೇಡರು, ಕಿತ್ತೂರ ಚನ್ನಮ್ಮ, ನರಗುಂದ ಬಾಬಾಸಾಹೇಬ, ಸುರಪುರದ ವೆಂಕಟಪ್ಪನಾಯಕ, ಇತರರು. ಈ ಹೋರಾಟಗಳು ವಿಫಲವಾದರೂ ಮುಂದಿನ ಶತಮಾನದಲ್ಲಿ ಸ್ವಾತಂತ್ರೃ ಹೋರಾಟಕ್ಕೆ ಸ್ಫೂರ್ತಿ ನೀಡಿದವು. ಈ ನಾಯಕರ ಸಂಕಲ್ಪ ಶಕ್ತಿ, ದೃಢತೆ, ದೇಶಪ್ರೇಮ, ತ್ಯಾಗ, ಬಲಿದಾನವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಧುರಾ ಹೆಗಡೆ, ಅಶೋಕ ನಾಯಕ, ಪ್ರಾಚಾರ್ಯ ರಾಮನಗೌಡ ದೊಡಮನಿ, ಎಂ.ಎಸ್. ನರೇಗಲ್ಲ, ಡಾ. ಡಿ.ಜಿ. ಶೆಟ್ಟಿ, ಬಿ.ಬಿ. ಪಾಟೀಲ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ವಾಗೀಶ ಚವಡಿ, ಶೋಭಾ ಪರೀಟ, ಮಂಜುನಾಥ ಕಲಕೇರಿ, ರೇಣುಕಾಚಾರ್ಯ ಹಿರೇಮಠ, ಪದ್ಮಾವತಿ ಬಿ. ಇತರರು ಇದ್ದರು.
ಹೇಮಾ ಕಮ್ಮಾರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಕೌಶಿಕ ನಿರೂಪಿಸಿದರು.