ಜಿಲ್ಲೆ

ಹರ-ಗುರು ಅವತಾರವೇ ಶಿವರಾತ್ರಿ

ಹುಬ್ಬಳ್ಳಿ: ಶಿವನು ಲಿಂಗ ರೂಪದಲ್ಲಿ, ಶ್ರೀ ಗುರುವು ಲಿಂಗೋದ್ಭವ ರೂಪದಲ್ಲಿ ಅವತರಿಸಿದ ಪವಿತ್ರ ಪರ್ವವೇ ಶಿವರಾತ್ರಿಯಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಮಹಾಶಿವರಾತ್ರಿಯ ಅಂಗವಾಗಿ ಶ್ರೀಶೈಲ ಪೀಠದಲ್ಲಿ ಆಯೋಜಿಸಿದ್ದ ಜಗದ್ಗುರು ಪಂಡಿತಾರಾಧ್ಯರ ಜಯಂತಿ ಮಹೋತ್ಸವ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಧರ್ಮವು ಗ್ಲಾನಿಯಾದಾಗ ಅದನ್ನು ಪ್ರತಿಷ್ಠಾಪನೆ ಮಾಡಲು, ಸಜ್ಜನರ ಸಂರಕ್ಷಣೆ ಮತ್ತು ದುರ್ಜನರ ಸಂಹಾರ ಮಾಡಲು ಭಗವಂತನು ಭೂಮಿಯಲ್ಲಿ ಆಗಾಗ ಅವತಾರವನ್ನು ತಾಳುತ್ತ ಬಂದಿದ್ದಾನೆ. ಅಂತೆಯೇ ಪರಮಾತ್ಮ ದುಷ್ಟರ ದುರ್ಬುದ್ಧಿಯನ್ನು ಪರಿವರ್ತಿಸಲು ಶಸ್ತ್ರಾಸ್ತ್ರಗಳನ್ನು ಬಿಟ್ಟು ಶಾಸ್ತ್ರವನ್ನು ಕೈಯಲ್ಲಿ ಹಿಡಿದು ಗುರು ರೂಪದಲ್ಲಿ ಅವತಾರ ತಾಳಿದ್ದಾನೆ ಎಂದರು.

ವೀರಶೈವ ಲಿಂಗಾಯತ ಧರ್ಮದ ಸಂಸ್ಥಾಪನಾಚಾರ್ಯರಾದ ಪಂಚಾಚಾರ್ಯರಲ್ಲಿ ಒಬ್ಬರಾದ ಜಗದ್ಗುರು ಪಂಡಿತಾರಾಧ್ಯರು ಶಿವನ ಆದೇಶದ ಮೇರೆಗೆ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದಿಂದ ಶಿವರಾತ್ರಿಯ ಶುಭ ಪರ್ವದ ದಿನದಂದೇ ಲಿಂಗೋದ್ಭವ ಅವತಾರಗೈದು ಸೂರ್ಯ ಸಿಂಹಾಸನ ಮಹಾಪೀಠವನ್ನು ಮತ್ತು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ ಉಲ್ಲೇಖವು ಸುಪ್ರಭೇದಾಗಮದಲ್ಲಿ ದೊರೆಯುತ್ತದೆ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.

ಜಮಖಂಡಿ, ನಾಗಣಸೂರ, ಶಹಾಪೂರ ಮಠದ ಶಿವಾಚಾರ್ಯರು, ಗಡ್ಡಿಯ ಸಂಗಮೇಶ್ವರ ಶ್ರೀಗಳು, ಬರ್ದಿಪುರದ ದತ್ತಗಿರಿ ಶ್ರೀಗಳು, ಪೀಠದ ವ್ಯವಸ್ಥಾಪಕ ಎಂ.ಬಿ. ಮಂಜುನಾಥ, ಪೀಠದ ಅರ್ಚಕ ಗಂಗಾಧರ ಹಿರೇಮಠ, ಇತರರು ಇದ್ದರು.