ಬೆಂಗಳೂರು ಗ್ರಾಮಾಂತರ: ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಸಂಭ್ರಮದ ನಡುವೆ ಕರೊನಾ ಮುಂಜಾಗ್ರತೆ ಕಡೆಗಣಿಸಬೇಡಿ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಅನುಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಮುತ್ಕೂರು ಗ್ರಾಮದಲ್ಲಿ ಭಾನುವಾರ ಕರೊನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವರಮಹಾಲಕ್ಷ್ಮಿ ಹಬ್ಬ ಮುಗಿದಿದೆ, ಮುಂದೆ ಗೌರಿ ಗಣೇಶ, ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ ಹಬ್ಬಗಳು ಬರಲಿವೆ. ಸಾರ್ವಜನಿಕರು ಹಬ್ಬದ ಆಚರಣೆ ನಡುವೆ ಕರೊನಾ ಬಗ್ಗೆ ಉದಾಸೀನ ತೋರಬಾರದು. ವರಮಹಾಲಕ್ಷ್ಮೀ ಹಬ್ಬದಂದು ಸಾಮಗ್ರಿ ಖರೀದಿ ನೆಪದಲ್ಲಿ ಮಾರುಕಟ್ಟೆಗಳಲ್ಲಿ ಪರಸ್ಪರ ಅಂತರ ಕಾಪಾಡದೆ ಮಾಸ್ಕ್ ಧರಿಸದೆ ಜನರು ಮುಗಿಬಿದ್ದಿದ್ದ ದೃಶ್ಯವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದರಿಂದ ನಾವೇ ಕರೊನಾ 3ನೇ ಅಲೆಗೆ ಆಹ್ವಾನ ಇತ್ತಂತೆ ಆಗುತ್ತದೆ. ಇಂಥ ಪರಿಸ್ಥಿತಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಶಾಲೆಗಳ ಆರಂಭಕ್ಕೆ ಆತಂಕ ಬೇಡ: ಸೋಮವಾರದಿಂದ (ಆ.23) 9ರಿಂದ 12ನೇ ತರಗತಿಗಳು ಆರಂಭವಾಗಲಿವೆ. ಪಾಲಕರು ಆತಂಕಪಡಬೇಕಿಲ್ಲ. ಸರ್ಕಾರದ ಸುತ್ತೋಲೆಯಂತೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳು ಧೈರ್ಯವಾಗಿ, ಆತ್ಮವಿಶ್ವಾಸದಿಂದ ತರಗತಿಗಳಿಗೆ ಹಾಜರಾಗಬಹುದು ಎಂದು ಎಂಟಿಬಿ ನಾಗರಾಜ್ ಹೇಳಿದರು.
ತಾಲೂಕು ಬಿಇಒಗಳ ಜತೆ ಈಗಾಗಲೆ ಹಲವು ಬಾರಿ ಚರ್ಚಿಸಲಾಗಿದೆ. ಹಲವು ಶಾಲೆಗಳಿಗೆ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲಿಸಿರುವುದಾಗಿ ತಿಳಿಸಿದರು.
ಅಭಿಯಾನ ಮುಂದುವರಿಕೆ: ಎಂಟಿಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಸಕೋಟೆ ತಾಲೂಕಿನ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತವಾಗಿ ಕರೊನಾ ಲಸಿಕೆ ವಿತರಿಸಲಾಗುತ್ತಿದೆ. ಈಗಾಗಲೇ ಮೊದಲ ಡೋಸ್ ಪಡೆದವರು ತಪ್ಪದೆ ಎರಡನೆ ಡೋಸ್ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.