ಹುಬ್ಬಳ್ಳಿ; ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಕರೊನಾತಂಕವಿದೆ. ಆದರೂ ಮುಂಜಾಗ್ರತಾ ಕ್ರಮದಿಂದ ಜನರು ಮಾಸ್ಕ್, ಸ್ಯಾನಿಟೈಸರ್ ಬಳಸಿ ವ್ಯಾಪಾರ -ವಹಿವಾಟಿನಲ್ಲಿ ತೊಡಗುತ್ತಿದ್ದಾರೆ.
ನಗರದ ದುರ್ಗದಬೈಲ್, ಕೊಯಿನ್ ರಸ್ತೆ, ಜನತಾ ಬಜಾರ್, ಹಳೆಯ ಬಸ್ ನಿಲ್ದಾಣ ಇತರೆಡೆ ಜನರ ದಂಡಿದೆ. ಕೈಯಲ್ಲಿ ಚೀಲ, ಮುಖಕ್ಕೆ ಮಾಸ್ಕ್, ಜೇಬಿನಲ್ಲಿ ಸ್ಯಾನಿಟೈಸರ್ ಇಟ್ಟುಕೊಂಡಿರುವ ಜನರು ನಿರ್ಭೀತಿಯಿಂದ ಹಬ್ಬದ ಸಂಭ್ರಮಕ್ಕೆ ವ್ಯಾಪಾರ ನಡೆಸುತ್ತಿದ್ದಾರೆ.
ತರಕಾರಿ, ಹೊಸ ಬಟ್ಟೆ, ಬಂಗಾರದ ಆಭರಣ, ದಿನಸಿ, ಹೂಬುಟ್ಟಿ ಸೇರಿ ಇತರೆ ಸಾಮಗ್ರಿಗಳ ಖರೀದಿ ಭರಾಟೆ ಜೋರಿದೆ. ಅಂಗಡಿಯ ಮಾಲೀಕರು, ನೌಕರರು ಮುಖಕ್ಕೆ ಮಾಸ್ಕ್ ಧರಿಸಿ ವಹಿವಾಟಿನಲ್ಲಿ ತೊಡಗಿದ್ದಾರೆ. ಇತ್ತ ಜನರು ಪರಸ್ಪರ ಅಂತರ ಕಾಯ್ದುಕೊಂಡು ವಿವಿಧ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದಾರೆ. ಸೋಂಕು ಇಳಿಮುಖವಾಗುತ್ತಿದ್ದರೂ ಚಳಿಗಾಲ ಇರುವುದರಿಂದ ಮತ್ತೆ ಸೋಂಕು ಹರಡುವ ಅಪಾಯವಿದೆ ಎಂಬುದು ವೈದ್ಯರ ಅಭಿಪ್ರಾಯ. ಇದನ್ನು ಅರಿತಿರುವ ಜನರು ಸೋಂಕು ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿದ್ದಾರೆ. ಹಾಗಾಗಿಯೇ ಜನರ ದಂಡು ಮಾರುಕಟ್ಟೆ ತುಂಬೆಲ್ಲ ಹರಡಿದೆ.
ಹೆಚ್ಚಿದ ಸಂಚಾರ ದಟ್ಟಣೆ: ಹಬ್ಬದ ಮುನ್ನ ವಿವಿಧ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳತ್ತ ದಾಂಗುಡಿ ಇಡುತ್ತಿದ್ದಾರೆ. ವಾಹನ ಸಮೇತ ಆಗಮಿಸುತ್ತಿರುವುದರಿಂದ ನಗರ ವಿವಿಧೆಡೆ ಸಂಚಾರ ದಟ್ಟಣೆ ಹೆಚ್ಚಿದೆ. ನೆಹರು ಕ್ರೀಡಾಂಗಣ ಬಳಿ ಸೇರಿ ಇತರೆಡೆ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯುತ್ತಿರುವುದು ಕೂಡ ಸಂಚಾರ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಿದೆ.
ಸಾಲು ಸಾಲು ಜನ: ನಗರದ ವಿವಿಧ ಬಟ್ಟೆ ಅಂಗಡಿ, ಆಭರಣಗಳ ಮಳಿಗೆ, ಆಟೋಮೊಬೈಲ್, ವಾಹನಗಳ ಶೋ ರೂಮ್ ದಿನಸಿ ಅಂಗಡಿಯತ್ತ ಜನರು ಸಾಲು ಸಾಲಾಗಿ ತೆರಳುತ್ತಿದ್ದಾರೆ. ವಿವಿಧ ಅಂಗಡಿಗಳು ರಿಯಾಯಿತಿ ಘೊಷಣೆ ಹಿನ್ನೆಲೆಯಲ್ಲಿ ಜನರು ಖರೀದಿಯತ್ತ ದೃಷ್ಟಿ ಹರಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಮಾಸ್ಕ್, ಸ್ಯಾನಿಟೈಸರ್, ಪರಸ್ಪರ ಅಂತರ ಕಾಯ್ದುಕೊಂಡು ವಹಿವಾಟು ನಡೆಸುತ್ತಿರುವುದರು ಭೇಷ್ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.