ಕುಶಾಲನಗರ: ಪಟ್ಟಣದಲ್ಲಿ ಫೆ.3ರಂದು ಆಯೋಜಿಸಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಬ್ಬದ ಮಾದರಿಯಲ್ಲಿ ಆಚರಣೆಗೊಳ್ಳಬೇಕಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಹೇಳಿದರು.
ಇಲ್ಲಿನ ಕಸಾಪ ಕಚೇರಿಯಲ್ಲಿ ಭಾನುವಾರ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೊಸ ತಾಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧ ಮತ್ತು ಅರ್ಥಬದ್ಧವಾಗಿ ಆಚರಿಸಬೇಕಿದೆ. ಈ ಸಂಬಂಧ ಈಗಾಗಲೇ ರಚಿಸಿರುವ ಉಪ ಸಮಿತಿಗಳ ಪದಾಧಿಕಾರಿಗಳು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲೂಕಿನಾದ್ಯಂತ ಇರುವ ಸಾಹಿತ್ಯಾಸಕ್ತರು, ಸಂಘ-ಸಂಸ್ಥೆಗಳ ಪ್ರಮುಖರು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕಸಾಪ ಜಿಲ್ಲಾ ನಿರ್ದೇಶಕರಾದ ಡೆನ್ನಿಸ್ ಡಿಸೋಜಾ, ಟಿ.ಜಿ.ಪ್ರೇಮಕುಮಾರ್, ಎಂ.ಇ.ಮೊಹಿದ್ದೀನ್, ಫ್ಯಾನ್ಸಿ ಮುತ್ತಣ್ಣ, ಕೆ.ಎನ್.ದೇವರಾಜು, ಮೆ.ನಾ.ವೆಂಕಟನಾಯಕ್, ತಾಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರಿ, ದ್ವಾರ ಸಮಿತಿಯ ನಾಗೇಗೌಡ, ವೇದಿಕೆ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರೇಮಕುಮಾರ್, ಸಾಂಸ್ಕ್ರತಿಕ ಸಮಿತಿ ಸಂಚಾಲಕ ಉ.ರಾ.ನಾಗೇಶ್, ಗಾಯಕ ಬಿ.ಎಸ್.ಪರಮೇಶ್, ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ಇತರರು ಹಾಜರಿದ್ದರು.