ಜಿಲ್ಲೆ

ಹಬ್ಬಕ್ಕೆ ಚುರುಕಾದ ಮಾರುಕಟ್ಟೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಿಜಯದಶಮಿ ಹಿನ್ನೆಲೆಯಲ್ಲಿ ಶನಿವಾರ ನಗರದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಹಣ್ಣು, ಹಂಪಲಗಳ ಖರೀದಿ ಭರಾಟೆ ಜೋರಾಗಿತ್ತು.

ಕರೊನಾ ಕಾರಣದಿಂದ ಭಿನ್ನವಾದ ಪರಿಸ್ಥಿತಿಯಲ್ಲಿ ಈ ಬಾರಿ ದಸರಾ ಹಬ್ಬ ಆಚರಿಸಲಾಗುತ್ತಿದೆ. ಹೆಚ್ಚು ಜನ ಸೇರುವುದು, ಮನೆಗೆ ಎಲ್ಲ ಸಂಬಂಧಿಕರನ್ನು ಕರೆಯುವುದು ಸಲ್ಲದು ಎಂಬ ಮುನ್ನೆಚ್ಚರಿಕೆ ಜನರಿಗೆ ಇದೆ. ಆದಾಗ್ಯೂ ಪೂಜೆ ಪುನಸ್ಕಾರಗಳ ವಿಷಯದಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಅದಕ್ಕಾಗಿ ಪೂಜಾ ಸಾಮಗ್ರಿ, ಬಟ್ಟೆ, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದಿ ಚುರುಕಾಗಿರುವುದು ಹುಬ್ಬಳ್ಳಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರ ಕಂಡುಬಂತು. ಹಬ್ಬದ ವೇಳೆಯ ರಿಯಾಯಿತಿ ಕೊಡುಗೆಯ ಪ್ರಯೋಜನ ಪಡೆಯಲು ಹಲವರು ಮೊದಲೇ ತಯಾರಿ ಮಾಡಿಕೊಂಡಿರುವುದರಿಂದ ಕುಟುಂಬ ಸಮೇತರಾಗಿಯೂ ಬಂದಿದ್ದರು.

ಕರೊನಾ ರೋಗ ಹರಡದಂತೆ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತೆಯನ್ನು ಜನರು ಅಷ್ಟೇನೂ ನಿರ್ಲಕ್ಷಿಸದಿರುವುದು ಸಹ ಕಂಡುಬಂತು. ಹಲವರು ಮಾಸ್ಕ್ ಧರಿಸಿಯೇ ಮಾರುಕಟ್ಟೆಗೆ ಆಗಮಿಸಿದ್ದರು. ಅಂಗಡಿಯವರೂ ಸ್ಯಾನಿಟೈಸರ್, ಅಂತರ ನಿರ್ವಹಣೆಯಂಥ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಅಲ್ಪ ಬೆಲೆ ಹೆಚ್ಚಳ: ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳಿಗೆ ಸಾಮಾನ್ಯ ದಿನಕ್ಕಿಂತ ತುಸು ಹೆಚ್ಚಿನ ಬೆಲೆ ಇದ್ದರೂ ಹಬ್ಬದ ಸಂತಸದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 70-80 ರೂ.ಗೆ ಒಂದು ಮಾಲೆ, 40-50 ರೂ.ಗೆ ಮಾರುದ್ದ ಹೂವು, 25-30 ರೂ.ಗಳಿಗೆ ಒಂದು ತೆಂಗಿನಕಾಯಿ, 30 ರೂ.ಗೆ ಜೋಡಿ ಬಾಳೆ ದಿಂಡು, 20 ರೂ.ಗೆ 5-6 ಮಾವಿನ ತಳಿರುಗಳು, 60-70 ರೂ.ಗೆ ಜೋಡಿ ಕಬ್ಬುಗಳು… ಹೀಗೆ ದರ ನಿಗದಿ ಮಾಡಲಾಗಿತ್ತು. ಸಾರ್ವಜನಿಕರು ಅಷ್ಟೇನೂ ಬೇಸರ ಮಾಡಿಕೊಳ್ಳದೇ, ಹೆಚ್ಚು ಕಂಜೂಸಿ ತೋರಿಸದೇ ತಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿಗೆ ಮುಗಿಬಿದ್ದಿದ್ದರು.

ಸಂಜೆ ದಟ್ಟಣೆಯಾಗಬಹುದೆಂಬ ಕಾರಣದಿಂದ ಅನೇಕರು ಬೆಳಗ್ಗೆಯೇ ಮಾರುಕಟ್ಟೆಗೆ ಬಂದು ಪೂಜಾ ಸಾಮಗ್ರಿ, ಹೂವು-ಹಣ್ಣುಗಳನ್ನು ಖರೀದಿಸಿದ್ದರು. ಜನತಾ ಬಜಾರ, ದುರ್ಗದ ಬೈಲ್ ಮಾರುಕಟ್ಟೆ ಜತೆಗೆ ಗೋಕುಲ ರಸ್ತೆ, ಕೇಶ್ವಾಪುರದ ಸುಳ್ಳ ಮತ್ತು ಕುಸುಗಲ್ಲ ರಸ್ತೆ, ಉಣಕಲ್ಲ, ಭೈರಿದೇವರಕೊಪ್ಪ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಇಕ್ಕೆಲದಲ್ಲಿ ಹೂವು, ಹಣ್ಣು, ಬಾಳೆ ದಿಂಡು, ಕಬ್ಬಿನ ಮಾರಾಟ ನಡೆದಿತ್ತು.

ವ್ಯಾಪಾರಸ್ಥರು ಸಹ ಹಬ್ಬದ ಅಂಗವಾಗಿ ಪೂಜಾ ಸಾಮಗ್ರಿಗಳನ್ನು ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಇಟ್ಟಿದ್ದರು. ವಿಜಯದಶಮಿಯಂದು ದುರ್ಗಾದೇವಿಯ ವಿಶೇಷ ಪೂಜೆಗಾಗಿ ಸೀರೆ ಖರೀದಿಯೂ ನಡೆದಿದ್ದು, ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ದಟ್ಟಣೆ ಕಂಡುಬಂದಿತು.

ದಸರಾ ಹಿನ್ನೆಲೆಯಲ್ಲಿ ಫ್ರಿಜ್, ಟಿವಿ ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವವರು ಶನಿವಾರವೇ ಅಂಗಡಿಗಳಿಗೆ ತೆರಳಿ ತಮಗೆ ಇಷ್ಟವಾದ ಉತ್ಪನ್ನಗಳನ್ನು ಬುಕ್ ಮಾಡಿ, ವಿಜಯದಶಮಿಯ ದಿನ ಮನೆಗೆ ತಲುಪಿಸಲು ಮನವಿ ಮಾಡುತ್ತಿದ್ದರು. ವಿಜಯದಶಮಿಯಂದು ಹೊಸ ವಾಹನಗಳ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಕೆಲವರು ವಾರ ಅಥವಾ ಅದಕ್ಕಿಂತ ಮುಂಚೆಯೇ ವಾಹನಗಳನ್ನು ಕಾಯ್ದಿರಿಸಿದ್ದರು. ಶನಿವಾರದಂದು ವಾಹನಗಳ ಶೋರೂಮ್ೆ ತೆರಳಿ ಬುಕ್ಕಿಂಗ್ ಕಾರ್ಯ ಪೂರ್ಣಗೊಳಿಸಿದರು.

ವಿವಿಧ ಸಾಮಗ್ರಿಗಳ ಖರೀದಿಗೆ ಮಾರುಕಟ್ಟೆಗೆ ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಗೋಕುಲ ರಸ್ತೆ, ಕೇಶ್ವಾಪುರ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ಹೊಸೂರು ವೃತ್ತ, ವಿದ್ಯಾನಗರ, ಉಣಕಲ್ಲ ಸೇರಿದಂತೆ ವಿವಿಧೆಡೆ ವಾಹನ ದಟ್ಟಣೆ ಕಂಡುಬಂದಿತು.

ಧಾರವಾಡ ವರದಿ: ಅತಿವೃಷ್ಟಿಯ ಅನಾಹುತಗಳ ಮಧ್ಯೆಯೂ ಜನರು ದಸರಾ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಲು ಮುಂದಾಗಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಬರುತ್ತಿದ್ದಾರೆ. ಇದರಿಂದ ವಿದ್ಯಾನಗರಿಯ ಪ್ರಮುಖ ಬೀದಿಗಳಲ್ಲಿ ಶನಿವಾರ ಎಂದಿಗಿಂತ ಹೆಚ್ಚಿನ ಜನರು, ವಾಹನಗಳು ಕಂಡುಬಂದವು.

ಈ ಸಲ ಮಳೆಗಾಲ ಇನ್ನೂ ಮುಗಿದಿಲ್ಲ. ಸಂಜೆ ಮಳೆ ಬಂದೀತೆಂಬ ಕಾರಣಕ್ಕೆ ಅನೇಕರು ಬೆಳಗ್ಗೆಯೇ ಪೇಟೆಗೆ ಬಂದು ಖರೀದಿ ಮುಗಿಸಿದರು. ಅವರ ನಿರೀಕ್ಷೆಯಂತೆಯೇ ಸಂಜೆ ಮಳೆ ಸುರಿದು, ಮಾರುಕಟ್ಟೆಯಲ್ಲಿ ಕೆಲಹೊತ್ತು ಗೊಂದಲ ಉಂಟಾಗಿತ್ತು.

ಹಲವರು ಊರಿಗೆ: ಹಬ್ಬದ ಅಂಗವಾಗಿ ಎರಡು ದಿನ ಸರ್ಕಾರಿ ರಜೆ ಇದೆ. ಹೀಗಾಗಿ ಸರ್ಕಾರಿ ನೌಕರರನೇಕರು ಶನಿವಾರವೇ ತಮ್ಮ ಊರಿಗೆ ತೆರಳುತ್ತಿ ದ್ದುದು ಕಂಡು ಬಂದಿತು.