ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ಧ ರಜತ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಆರ್.ನರೇಂದ್ರ ಉದ್ಘಾಟಿಸಿದರು. ಜಯದೇವ್, ರಾಜೇಂದ್ರನ್, ಸುರೇಶ್‌ನಾಯ್ಡು, ಮಧುಸೂದನ್, ಸತ್ಯಪ್ರಿಯ ಇತರರು ಇದ್ದರು.  
ಜಿಲ್ಲೆ

ಹನೂರು ಶೈಕ್ಷಣಿಕ ವಲಯದಲ್ಲಿ ಗುಣಮಟ್ಟದ ಶಿಕ್ಷಣ

ಹನೂರು: ಕಳೆದ 8 ವರ್ಷದಿಂದ ಎಸ್ಸೆಸ್ಸೆಲ್ಸಿಯಲ್ಲಿ ಹನೂರು ಶೈಕ್ಷಣಿಕ ವಲಯ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಪಿಯುಸಿ ಫಲಿತಾಂಶದಲ್ಲೂ ಮುಂದಿರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಎಂದು ಶಾಸಕ ಆರ್.ನರೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಆರ್.ಎಸ್.ದೊಡ್ಡಿ ಬಳಿಯ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹನೂರು ಭಾಗವು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಸುಮಾರು 450 ಹೆಚ್ಚು ಹಳ್ಳಿಗಳನ್ನು ಹೊಂದಿದೆ. ಈ ಹಿಂದೆ ಹನೂರಿನಲ್ಲಿ ಶಿಕ್ಷಣ ಪಡೆಯಲು ಶಾಲೆಗಳಿರಲಿಲ್ಲ. ಆದರೆ 1937ರಲ್ಲಿ ಹನೂರಿನಲ್ಲಿ ಪ್ರಾರಂಭವಾದ ಬಿ.ಮುನಿಯಪ್ಪ ಗೌಂಡರ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯನ್ನು ನೀಡಿದ್ದು, ಇಂದು ಅನೇಕರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಇದೀಗ ಹನೂರು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದು, ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯು ಸಹ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಹನೂರು ಶೈಕ್ಷಣಿಕವಾಗಿ ಮುಂಚೂಣಿ; ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ್ದ ಚಾಮರಾಜನಗರ ಇದೀಗ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದೆ. ಅದರಲ್ಲೂ ಹನೂರು ಭಾಗವು ಆರ್ಥಿಕವಾಗಿ ಸ್ವಲ್ಪ ಹಿಂದುಳಿದಿರಬಹುದು. ಅದರೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಪ್ರತಿಯೊಂದು ಮಗು ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಗತ್ಯಕ್ಕೆ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲದೇ ಇಂದಿರಾಗಾಂಧಿ, ಏಕಲವ್ಯ ಹಾಗೂ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲದೇ ಶಾಲಾ, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗಿದೆ. ಅದೇ ರೀತಿಯಾಗಿ ಶಿಕ್ಷಕರ ಶ್ರಮ ಗುಣಮಟ್ಟದ ಶಿಕ್ಷಣಕ್ಕೆ ಕಾರಣವಾಗಿದೆ. ಹಾಗಾಗಿ ಶೈಕ್ಷಣಿಕ ವಲಯ ಉತ್ತಮ ಫಲಿತಾಂಶವನ್ನು ಗಳಿಸಿದ್ದು, ಜಿಲ್ಲೆಯಲ್ಲಿಯೇ ತನ್ನದೇಯಾದ ಛಾಪನ್ನು ಮೂಢಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಮಾತನಾಡಿ, ಈ ಭಾಗದಲ್ಲಿ ಹಿಂದೆ ಶಿಕ್ಷಣ ಪಡೆಯಲು ಅಲೆಯುವಂತಾಗಿತ್ತು. ಆದರೀಗ ಹನೂರು ಶೈಕ್ಷಣಿಕವಾಗಿ ಮುಂದುವರಿದಿರುವುದು ಹೆಮ್ಮೆಯ ವಿಷಯ. ಈ ದಿಸೆಯಲ್ಲಿ ಶ್ರೀ ವಿವೇಕಾನಂದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ 25 ವರ್ಷ ಪೂರೈಸಿರುವುದು ಶೈಕ್ಷಣಿಕ ಪ್ರಗತಿಯ ಸಂಕೇತ. ಹಾಗಾಗಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು. ಜತೆಗೆ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್, ದೀನಬಂಧು ಸಂಸ್ಥೆಯ ಗೌರಾವಾಧ್ಯಕ್ಷ ಜಯದೇವ್, ಪಪಂ ಉಪಾಧ್ಯಕ್ಷ ಗಿರೀಶ್, ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಆರ್.ಉಮಾ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ರಾಜೇಂದ್ರನ್, ಪ್ರಾಂಶುಪಾಲ ಜಿ.ಮಧುಸೂದನ್, ಮುಖ್ಯ ಶಿಕ್ಷಕಿ ಎಲ್. ಸತ್ಯಪ್ರಿಯ ಮುಖಂಡರಾದ ರವೀಂದ್ರ, ರಾಘವೇಂದ್ರನಾಯ್ಡು, ವೆಂಕಟರಮಣ ನಾಯ್ಡು, ವೀರಭದ್ರಪ್ಪ, ಮುತ್ತುಸ್ವಾಮಿನಾಯ್ಡು, ಸಂಜೀವ್ ಹಾಗೂ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.