ಕೊಳ್ಳೇಗಾಲ: ಹನೂರು ಕ್ಷೇತ್ರ ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ಮಾಜಿ ಸಚಿವ ದಿ.ರಾಜುಗೌಡರ ಕೊಡುಗೆ ಅಪಾರ ಎಂದು ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಜಿ.ವಿ.ಗೌಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮಾಜಿ ಸಚಿವ ದಿ.ಜಿ ರಾಜುಗೌಡ ಅವರ 21ನೇ ಪುಣ್ಯ ಸ್ಮರಣ ಕಾರ್ಯಕ್ರಮ ಸಂಬಂಧ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿ.ರಾಜುಗೌಡ ಅವರು ಅಗ್ರಗಣ್ಯ ರಾಜಕಾರಣಿ. ಪ್ರಜಾಪ್ರಭುತ್ವ ವ್ಯವಸ್ಥೆ ಆಶಯದಂತೆ ಜನರಿಂದ, ಜನರಿಗಾಗಿ ಜನರಿಗೋಸ್ಕರ ಹನೂರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸ್ವಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕೆ 3 ಎಕರೆ ಜಮೀನು ದಾನ ಮಾಡಿ ಶೈಕ್ಷಣಿಕವಾಗಿ ಕ್ಷೇತ್ರವನ್ನು ಸದೃಢಗೊಳಿಸಲು ಅಡಿಗಲ್ಲು ಹಾಕಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ರಾಜುಗೌಡರ ಕೆಲಸಗಳು ಕಾಣುತ್ತವೆ. ಎಲ್ಲ ಜಾತಿ, ಧರ್ಮದವರನ್ನು ಸಮಾನಾಗಿ ಕಾಣುತ್ತಿದ್ದರು. ಕಷ್ಟದಲ್ಲಿರುವ ಬಡಜನರಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ನಿಧನರಾಗಿ 21 ವರ್ಷ ಕಳೆಯುತ್ತಿದ್ದರೂ ಅವರು ಮಾಡಿರುವ ಕೆಲಸಗಳು ಜೀವಂತವಾಗಿವೆ. ಅವರ ಕಾರ್ಯವೈಖರಿಯನ್ನು ಕೇಳಿ ತಿಳಿದುಕೊಳ್ಳುವ ಬದಲು ಕ್ಷೇತ್ರದಲ್ಲೇ ಒಮ್ಮೆ ಸುತ್ತಿ ನೋಡಿದರೆ ಅವರ ಛಾಪು ಎಂತಹದು ಎಂದು ತಿಳಿದು ಬರುತ್ತದೆ. ಕ್ಷೇತ್ರದ ಜನರ ಸೇವಕರಾಗಿ ಕೆಲಸ ದುಡಿದಿದ್ದಾರೆ. ಅಂತೆಯೇ ಅವರ ಪುತ್ರರಾದ ಆರ್.ನರೇಂದ್ರ ಅವರು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದಾರೆ ಎಂದರು.
ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ರಾಜುಗೌಡರು ನಿಷ್ಠೂರವಾದಿಯಾಗಿದ್ದರು. ನೇರವಾಗಿ ನುಡಿಯುತ್ತಿದ್ದರು. ಕಷ್ಟದ ಜನರನ್ನು ಕಂಡರೆ ಮರಗುತ್ತಿದ್ದರು, ನಾನೂ ಅವರ ಶಿಷ್ಯ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ದಿ.ರಾಜುಗೌಡರ ಸ್ಮರಣೆ ಅಂಗವಾಗಿ ಆರೋಗ್ಯ ಶಿಬಿರ ಏರ್ಪಡಿಸಿರುವುದು ಉತ್ತಮವಾಗದ ಕೆಲಸವಾಗಿದೆ. ಹಿಂದೆ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ ಅನುದಾನದ ಕೊರತೆ ಉಂಟಾಗಿತ್ತು. ಈ ವೇಳೆ ರಾಜುಗೌಡರು ಜಿಲ್ಲೆಯ ಎಲ್ಲ ಶಾಸಕರು ತಮ್ಮ ಅನುದಾನ ನೀಡುವಂತೆ ಆದೇಶಿಸಿದ್ದರು. ಅದರಂತೆ ನಾವೆಲ್ಲರೂ ಜಿಲ್ಲಾ ಕ್ರೀಡಾಂಗಣಕ್ಕೆ ಶಾಸಕರ ಅನುದಾನವನ್ನು ನೀಡಿದ್ದೆವು ಎಂದು ಸ್ಮರಿಸಿದರು.
ಶಾಸಕ ಆರ್ ನರೇಂದ್ರ ಮಾತನಾಡಿ, ತಂದೆ ಅವರ ಪುಣ್ಯಸ್ಮರಣೆ ಅಂಗವಾಗಿ ಕಳೆದ 21 ವರ್ಷಗಳಿಂದಲೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿ.ಜಿ ರಾಜುಗೌಡ ಚಾರಿಟಬಲ್ ಟ್ರಸ್ಟ್ ತೆರೆದು ಉಚಿತ ಆರೋಗ್ಯ ಶಿಬಿರ ಹಾಗೂ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಆರ್.ನರೇಂದ್ರ ಅವರ ಪತ್ನಿ ಆಶಾ ನರೇಂದ್ರ, ಪುತ್ರ ನವನೀತ್ ಗೌಡ, ಪುತ್ರಿ ನಿಖಿತಾ ಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹಾಗೂ ನೂರಾರು ಅಭಿಮಾನಿಗಳು ರಾಜುಗೌಡರ ಸಮಾಧಿಗೆ ಪೂಜೆ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಗೋಪಾಲ್‌ಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ.ಷುಶ್ರುತ್ ಮತ್ತಿತರಿದ್ದರು.