?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಹನೂರು-ಬಂಡಳ್ಳಿ ರಸ್ತೆಗೆ ಅಭಿವೃದ್ಧಿ ಭಾಗ್ಯ

ಕಿರಣ್ ಮಾದರಹಳ್ಳಿ

ಹನೂರು: ಹನೂರು-ಬಂಡಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಇದರಿಂದ ಹಲವು ವರ್ಷಗಳ ಕನಸು ನನಸಾಗುತ್ತಿದೆ.

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ನೀಡುತ್ತಿದ್ದ ಅನುದಾನ ಕಡಿಮೆ ಇತ್ತು. ಈ ಬಗ್ಗೆ ಸಿಎಂ ಅವರ ಗಮನಕ್ಕೆ ತಂದು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಹಾಗಾಗಿ 118 ಕೋಟಿ ರೂ. ಅನುದಾನ ದೊರೆತಿದ್ದು, ಇದರಲ್ಲಿ ಮ.ಬೆಟ್ಟ ರಸ್ತೆಗೆ 15 ಕೋಟಿ ರೂ., ಲೊಕ್ಕನಹಳ್ಳಿ ರಸ್ತೆಗೆ 5 ಕೋಟಿ ರೂ., ರಾಮಾಪುರ ರಸ್ತೆಗೆ 25 ಕೋಟಿ ರೂ., ಗೋಪಿನಾಥಂ ರಸ್ತೆಗೆ 1 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆಲವು ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ 67 ಕೋಟಿ ರೂ. ವೆಚ್ಚದಲ್ಲಿ ಮೋಡಹಳ್ಳಿ ದೊಡ್ಡಿಂದುವಾಡಿ, ಮೊಳಗನಕಟ್ಟೆ ಕೊತ್ತನೂರು, ಬಂಡಳ್ಳಿ - ಹನೂರು ಹಾಗೂ ಹನೂರು ರಾಮಾಪುರ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ ಎಂದರು.

ಹನೂರಿನಿಂದ ಬಂಡಳ್ಳಿ ಗ್ರಾಮದವರೆಗೆ 10 ಕಿ.ಮೀ. ರಸ್ತೆ ಹಲವು ವರ್ಷಗಳಿಂದ ತೀರ ಹದಗೆಟ್ಟಿತ್ತು. ಬಹುತೇಕ ಕಡೆಗಳಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿತ್ತು. ಇದರಿಂದ ವಾಹನ ಸವಾರರು ಸಂಚರಿಸಲು ನರಕ ಯಾತನೆಯನ್ನು ಅನುಭವಿಸುವಂತಾಗಿತ್ತು. ರಸ್ತೆ ಅಭಿವೃದ್ಧಿ ಪಡಿಸುವಂತೆ ಈ ಭಾಗದ ಜನರು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಇದ್ದರು.

2 ವರ್ಷದಿಂದೀಚೆಗೆ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ರಸ್ತೆಯನ್ನೇ ಬಿಟ್ಟು ಬದಿಯಲ್ಲಿ ಸಂಚರಿಸುವಂತಾಗಿತ್ತು. ಹದಗೆಟ್ಟ ರಸ್ತೆಯಿಂದಾಗಿ ಅಪಘಾತ ಉಂಟಾಗಿ ಸಾವು, ನೋವು ಸಂಭವಿಸಿತ್ತು. ಜತೆಗೆ ಮಾರ್ಗಮಧ್ಯೆಯೇ ತುರ್ತು ವಾಹನದಲ್ಲಿ ಹೆರಿಗೆಯಾದ ಘಟನೆಗಳು ಜರುಗಿತ್ತು. ಬಸ್‌ಗಳು ಆಗ್ಗಾಗ್ಗೆ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿತ್ತು. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಭಾಗದ ಜನರು ಹಲವು ಬಾರಿ ಸಾಮಾಜಿಕ ಜಾಲ ತಾಣದಲ್ಲಿ ರಸ್ತೆಯ ಅವ್ಯವಸ್ಥೆಯ ದೃಶ್ಯವನ್ನು ಹರಿ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ನಿರ್ಮಾಣವಾಗಿದ್ದ ಗುಂಡಿಗಳಿಗೆ ಗ್ರಾಮಸ್ಥರೇ ತಮ್ಮ ಸ್ವಂತ ಹಣದಿಂದ ಮಣ್ಣು ಹಾಕಿಸಿದ್ದರು. ರಸ್ತೆ ಅಭಿವೃದ್ಧಿ ಪಡಿಸುವುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯ ಕನಸು. ಇದೀಗ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವುದು ಈ ಭಾಗದ ಜನರು ನಿಟ್ಟುಸಿರು ಬಿಟ್ಟಂತಾಗಿದೆ.

ಸಂಸದ ಗೈರು: ಭೂಮಿಪೂಜೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರೊಡನೆ ಸಂಸದ ಸುನೀಲ್ ಬೋಸ್ ಭಾಗವಹಿಸಬೇಕಿತ್ತು. ಇದರಲ್ಲಿ ಯಾರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂಬ ಗೊಂದಲ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನೆ ಮಾಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಆದರೆ ಸಂಸದರು ಗೈರಾದ್ದರಿಂದ ಶಾಸಕರೇ ಭೂಮಿಪೂಜೆಯನ್ನು ನೆರವೇರಿಸಿದರು.

ಬಿಜೆಪಿ ಮುಖಂಡ ಡಾ.ಎಸ್ ದತ್ತೇಶ್‌ಕುಮಾರ್, ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ಉದ್ದನೂರು ಪ್ರಸಾದ್, ಪಿಎಸಿಸಿ ನಿರ್ದೇಶಕ ಲಿಂಗೇಗೌಡ, ಪಿಡಬ್ಲ್ಯುಡಿ ಎಇಇಗಳಾದ ಪುರುಷೋತ್ತಮ್, ಚಿನ್ನಣ್ಣ, ಎಇಗಳಾದ ಸುರೇಂದ್ರ, ಮಹೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜ್ಜದ್‌ಖಾನ್, ಮುಖಂಡರಾದ ವೆಂಕಟೇಗೌಡ, ವಿಜಯಕುಮಾರ್ ಹಾಗೂ ಇನ್ನಿತರರು ಇದ್ದರು.