ಜಿಲ್ಲೆ

ಹನೂರು ತಾಲೂಕಿನ ದೇಗುಲಗಳಲ್ಲಿ ನವರಾತ್ರಿ ಉತ್ಸವ

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ದಸರಾ ಅಂಗವಾಗಿ ನವರಾತ್ರಿ ಉಯ್ಯಲೋತ್ಸವ ಹಾಗೂ ವಿಜಯದಶಮಿಯಂದು ಜಂಬೂಸವಾರಿ ನಡೆದರೆ, ತಾಲೂಕಿನ ಕೆಲ ಗ್ರಾಮಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸುವುದರ ಮೂಲಕ ದಸರಾವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆಯ ಮೂಲಕ ಬನ್ನಿಮಂಟಪಕ್ಕೆ ಕರೆದೊಯ್ದು ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ಮಲೆಮಹದೇಶ್ವರ ಬೆಟ್ಟದಲ್ಲಿ ಶಿವ ಪಾರ್ವತಿಯ ಉತ್ಸವ ಮೂರ್ತಿಯನ್ನು ಬಿಳಿ ಕುದುರೆ ವಾಹನದಲ್ಲಿ ಕೂರಿಸಿ ದೇಗುಲದ ಸುತ್ತಾ ಮೆರವಣಿಗೆ ನಡೆಸಲಾಗುತ್ತದೆ. ಜತೆಗೆ ಶರನ್ನವರಾತ್ರಿಯ ಅಂಗವಾಗಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಶಿವ-ಪಾರ್ವತಿ ಉತ್ಸವ ಮೂರ್ತಿಗೆ ಬೇಡಗಂಪಣ ಅರ್ಚಕರು ವಿಶೇಷ ಪೂಜೆಯನ್ನು ನೆರವೇರಿಸುವುದರ ಮೂಲಕ 9 ದಿನಗಳ ಕಾಲ ರಾತ್ರಿ ಉಯ್ಯಲೋತ್ಸವವನ್ನು ನೆರವೇರಿಸಲಾಗುತ್ತದೆ.

ಹನೂರಿನ ಶ್ರೀ ಮೈಸೂರು ಮಾರಮ್ಮ (ಮಹಿಷಾಸುರ ಮರ್ದಿನಿ) ದೇಗುಲದಲ್ಲಿ ದೇವಿಯ ಮೂರ್ತಿಯನ್ನು 9 ದಿನಗಳ ಕಾಲ ಪಟ್ಟಕ್ಕೆ ಕೂರಿಸಲಾಗುತ್ತದೆ. ತಾಲೂಕಿನ ದೊಮ್ಮನಗದ್ದೆಯ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ವಿಜಯದಶಮಿಯಂದು ವಿವಿಧ ದೇವರ ಉತ್ಸವವನ್ನು ನೆರವೇರಿಸುವುದರ ಮೂಲಕ ಜಂಬೂಸವಾರಿ ನಡೆಸಲಾಗುತ್ತದೆ. ಹಾಗೆಯೇ ಲೊಕ್ಕನಹಳ್ಳಿಯಲ್ಲೂ ವಿವಿಧ ದೇವರ ಮೂರ್ತಿಯ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ನೆರವೇರಿಸುವುದರ ಮೂಲಕ ದಸರಾವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಹನೂರಿನ ಶ್ರೀ ಮೈಸೂರು ಮಾರಮ್ಮನ ದೇಗುಲದಲ್ಲಿ ವಿಜಯದಶಮಿಯಂದು ಉತ್ಸವ ಮೂರ್ತಿಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸುವುದರ ಮೂಲಕ ಜಿ.ವಿ.ಗೌಡ ನಗರದಲ್ಲಿನ ಬನ್ನಿಮರಕ್ಕೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಲಾಗುವುದು. ದೊಮ್ಮನಗದ್ದೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಹುಲಿ, ನಾಗಾಭರಣ, ಗರುಡ, ಕಾಮಧೇನು ಹಾಗೂ ಕಲ್ಪವೃಕ್ಷ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಿ ದೇಗುಲದ ಸಮೀಪದಲ್ಲಿನ ಬನ್ನಿಮರಕ್ಕೆ ಕರೆದೊಯ್ದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಹಾಗೆಯೇ ವಿಜಯದಶಮಿಯ ಮರುದಿನ ಲೊಕ್ಕನಹಳ್ಳಿ ಗ್ರಾಮ ಸಮೀಪದ ಬೇಡೆಗೆರೆ ಕಾಡಂಚಿನಲ್ಲಿರುವ ಶ್ರೀ ಹಿಂಬಿ ಮಹದೇಶ್ವರ ದೇಗುಲದಲ್ಲಿ ಕೊಂಡೋತ್ಸವ ನೆರವೇರಿಸಲಾಗುತ್ತದೆ.

ಲೊಕ್ಕನಹಳ್ಳಿ ಗ್ರಾಮ ದೇವತೆಗಳಾದ ಮುತ್ತುರಾಯ ಸ್ವಾಮಿ, ಪೆರುಮಾಳ ಸ್ವಾಮಿ, ಕೋಪರ ಹುಚ್ಚಮ್ಮ, ಷಣ್ಮುಗ, ಮಾರಮ್ಮ, ಸಂಪಿಗೇಶ್ವರ, ಬಸವ, ಕಂಚಿನ ಬಸವ, ಸಿದ್ದಪ್ಪಾಜಿ ಸೇರಿದಂತೆ ಒಂಬತ್ತು ದೇವರುಗಳ ಮೆರವಣಿಗೆ ನಡೆಸಲಾಗುತ್ತದೆ. ಈ ಮೂಲಕ ಹನೂರು ಭಾಗದ ಕೆಲ ಗ್ರಾಮಗಳಲ್ಲಿ ನಾಡಹಬ್ಬ ದಸರಾ ಉತ್ಸವವನ್ನು ನೆರವೇರಿಸುವುದರ ಮೂಲಕ ಆಚರಿಸುವುದು ಇಲ್ಲಿನ ವಿಶೇಷ. ಇನ್ನು ಬಹುತೇಕ ದೇಗುಲಗಳಲ್ಲಿ ಮಹಾನವಮಿ ಹಾಗೂ ವಿಜಯದಶಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ.