ಹನೂರು: ಚುನಾವಣಾ ನೀತಿಸಂಹಿತೆ ಪಾಲಿಸುವುದರ ಮೂಲಕ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಸಲು ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಮಧುಸೂದನ್ ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,08,227 ಪುರುಷರು, 1,05,482 ಮಹಿಳೆಯರು ಹಾಗೂ ಇತರ 16 ಸೇರಿದಂತೆೆ 2,13,725 ಮತದಾರರಿದ್ದಾರೆ. ಒಟ್ಟು 253 ಮತಗಟೆಗಳಿದ್ದು, ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಮನೆಯಲ್ಲಿ ಮತ ಚಲಾಯಿಸುವ ಅವಕಾಶ ಕಲ್ಪಿಸಲಾಗಿದ್ದು, ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 5,282 ಹಾಗೂ 2,749 ಅಂಗವಿಕಲ ಮತದಾರರಿದ್ದಾರೆ. ಪಿಆರ್‌ಒಗಳ ಮೂಲಕ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 31 ಶ್ಯಾಡೋ ಮತಗಟ್ಟೆಗಳು, 39 ಕಾಡಂಚಿನ ಮತಗಟ್ಟೆಗಳನ್ನು ತೆರೆಯಲಾಗಿದೆ. 28 ಸೆಕ್ಟರ್ ಅಧಿಕಾರಿಗಳ ತಂಡ, 9 ಫ್ಲೈಯಿಂಗ್ ಸ್ಕ್ವಾಡ್, 15 ಎಸ್‌ಎಸ್‌ಟಿ ತಂಡ, ಸಿಬ್ಬಂದಿಗೆ ತರಬೇತಿ ನೀಡಲು 28 ತರಬೇತುದಾರರು ಸೇರಿದಂತೆ ಚೆಕ್‌ಪೋಸ್ಟ್ ಪರಿಶೀಲನೆ, ಮಾದರಿ ನೀತಿ ಸಂಹಿತೆ ಹಾಗೂ ಇನ್ನಿತರ ಚುನಾವಣಾ ಕಾರ್ಯಗಳಿಗಾಗಿ ತಂಡವನ್ನು ರಚಿಸಲಾಗಿದೆ. ಪಟ್ಟಣದ ಹಿರಿಯ ಪಶು ವೈದ್ಯಾಧಿಕಾರಿ ಕಚೇರಿ ಚುನಾವಣಾಧಿಕಾರಿ ಕಚೇರಿಯಾಗಿ ಕಾರ್ಯನಿರ್ವಹಿಸಲಿದ್ದು, ಭದ್ರತಾ ಕೊಠಡಿ, ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರವನ್ನು ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಲ್ಲಿ ತೆರೆಯಲಾಗಿದೆ. ಚುನಾವಣೆ ಕಾರ್ಯಕ್ಕೆ ನಿಯೋಜನೆಯಾಗಿರುವ ಅಧಿಕಾರಿಗಳಿಗೆ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಏ.11ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜಕೀಯ ಸಭೆ ಹಾಗೂ ಇನ್ನಿತರ ಸಮಾರಂಭಗಳಿಗೆ ಅನುಮತಿ ನೀಡಲು ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ತಂಡ ರಚಿಸಲಾಗಿದೆ. ಇದರಲ್ಲಿ ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಅಗ್ನಿಶಾಮಕ, ಸಾರಿಗೆ, ಅಬಕಾರಿ, ಲೋಕೋಪಯೋಗಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಮಾಹಿತಿ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಗುರುಪ್ರಸಾದ್, ಕಚೇರಿ ಸಿಬ್ಬಂದಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.