ಜಿಲ್ಲೆ

ಹನೂರು ಕ್ಷೇತ್ರಕ್ಕೆ ಅನುದಾನ ನೀಡದ ಸರ್ಕಾರ

ಹನೂರು: ಕಳೆದ 4 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಹನೂರು ಕ್ಷೇತ್ರಕ್ಕೆ ಅನುದಾನ ನೀಡದ ಪರಿಣಾಮ ಶೇ.30ರಷ್ಟು ಸಿಸಿ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ಆರ್.ನರೇಂದ್ರ ಆರೋಪಿಸಿದರು.


ತಾಲೂಕಿನ ಅಲಗಾಪುರ ಗ್ರಾಮದಲ್ಲಿ ಮಂಗಳವಾರ 20 ಲಕ್ಷ ರೂ., ಶೆಟ್ಟಳ್ಳಿ ಹಾಗೂ ಕುರಟ್ಟಿಹೊಸೂರು ಗ್ರಾಮದಲ್ಲಿ ತಲಾ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರಕಿದ್ದು, ಇದರಲ್ಲಿ ಗಿರಿಜನರ ಹಾಡಿಗಳು ಸೇರಿದಂತೆ ಪ.ಜಾತಿ, ಪ.ವರ್ಗದ ಜನರು ವಾಸಿಸುವ ಕಾಲನಿಗಳಲ್ಲಿ ಶೇ.70ರಷ್ಟು ಸಿಸಿ ರಸ್ತೆ, ಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕ ಎಂಬ ಧೋರಣೆ ಅನುಸರಿಸುತ್ತಿದ್ದು, ಕಳೆದ 4 ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿಲ್ಲ. ಇದರಿಂದ ಬಾಕಿ ಉಳಿದಿರುವ ರಸ್ತೆಗಳನ್ನು ಸಿಸಿ ರಸ್ತೆಯಾಗಿಸಲು ಸಾಧ್ಯವಾಗಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.


ಆದಾಗ್ಯೂ ಜನರ ಸಮಸ್ಯೆಯನ್ನು ಮನಗಂಡು ಕೆಲ ಗ್ರಾಮಗಳಲ್ಲಿ ಕೆಆರ್‌ಐಡಿಎಲ್ ಲೆಕ್ಕ ಶೀರ್ಷಿಕೆಯಡಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಜವಾಬ್ದಾರಿ ಹೊತ್ತವರು ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸಮುದಾಯ ಭವನ ನಿರ್ಮಾಣಕ್ಕೂ ಭೂಮಿಪೂಜೆ: ತಾಲೂಕಿನ ಅರಬಗೆರೆ ಹಾಗೂ ಭದ್ರಯ್ಯನಹಳ್ಳಿ ಗ್ರಾಮದಲ್ಲಿ ತಲಾ 12 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.


ಈ ವೇಳೆ ಶಾಸಕ ಆರ್.ನರೇಂದ್ರ ಮಾತನಾಡಿ, ಕಳೆದ ಬಾರಿ 5 ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ವಿವಿಧ ವರ್ಗದ ಜನರಿಗೆ ಅನುಕೂಲವಾಗುವಂತೆ 137 ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಆದರೆ ಕೆಲವು ಗ್ರಾಮದಲ್ಲಿ ಅನುದಾನದ ಕೊರತೆಯಿಂದ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ದಿಸೆಯಲ್ಲಿ ಇದೀಗ ಭದ್ರಯ್ಯನಹಳ್ಳಿ ಹಾಗೂ ಅರಬಗೆರೆ ಗ್ರಾಮದಲ್ಲಿ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.


ಇದಕ್ಕೂ ಮುನ್ನ ಹೊಂಡರಬಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಹಾಗೂ ಗ್ರಾಮದಿಂದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.


ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಪಪಂ ಉಪಾಧ್ಯಕ್ಷ ಗಿರೀಶ್, ಬಂಡಳ್ಳಿ ಗ್ರಾಪಂ ಅಧ್ಯಕ್ಷೆ ಮಿಲ್ಲತ್‌ಜಾನ್, ಶೆಟ್ಟಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ರಾಜರಾಮ್, ಸದಸ್ಯರಾದ ಜಯಲಕ್ಷ್ಮೀ, ರಾಜಮ್ಮ, ಮಹದೇವಮ್ಮ, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ಎಇ ಶೋಭಾ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಮುಖಂಡರಾದ ಅಜ್ಜೀಪುರದ ನಾಗರಾಜು, ಮಾಸ್ತಿಗೌಡ, ಉಮೇಶ್, ಮಹದೇವ, ಸಂತೋಷ್, ರಾಜಶೇಖರ್, ಗೋವಿಂದರಾಜು, ಮಂಜು ಇತರರು ಇದ್ದರು.