ಜಿಲ್ಲೆ

ಹನೂರು ಕೆರೆಗಳಿಗೆ ನೀರು ತುಂಬಿಸಲು ಕ್ರಮ

ಹನೂರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಆರ್.ನರೇಂದ್ರ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವರು, ಕ್ಷೇತ್ರದ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿರುವುದು ಗಮನಕ್ಕೆ ಬಂದಿದೆ. ಹನೂರು ತಾಲೂಕಿನ 10 ಕೆರೆ, 6 ಕಟ್ಟೆಗಳಿಗೆ ನೀರು ತುಂಬಿಸುವ ಹಾಗೂ 16 ಪಿಕಪ್‌ಗಳ ನಿರ್ಮಾಣಕ್ಕೆ 185 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಕಾವೇರಿ ನೀರಾವರಿ ನಿಗಮದ ಮಂಡಳಿಯ 73ನೇ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಇನ್ನು ಗುಂಡಾಲ್ ಏತ ನೀರಾವರಿ ಯೋಜನೆಗೆ ಬೂದುಬಾಳು ಗ್ರಾಮದಲ್ಲಿರುವ ಸರಬರಾಜು ಘಟಕದ ಬಳಿ ಪಂಪ್‌ಹೌಸ್ ನಿರ್ಮಿಸಿ ರಾಮನಗುಡ್ಡೆ, ಹುಬ್ಬೆಹುಣಸೆ ಹಾಗೂ ಉಡುತೊರೆ ಜಲಾಶಯಗಳಿಗೆ ನೀರು ತುಂಬಿಸುವ ಕಾಮಗಾರಿಗೆ 170 ಕೋಟಿ ರೂ. ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ಸ್ವೀಕೃತವಾಗಿದೆ. ಜತೆಗೆ ಗೋಪಿನಾಥಂ ಡ್ಯಾಂಗೆ ನೀರು ತುಂಬಿಸುವ ಸಂಬಂಧ ತಾಂತ್ರಿಕ ಕಾರ್ಯಸಾಧ್ಯತಾ ವರದಿ ಕಾವೇರಿ ನೀರಾವರಿ ನಿಗಮದಿಂದ ಸಿದ್ಧತೆ ಹಂತದಲ್ಲಿದೆ. ಕಾಮಗಾರಿಗಳನ್ನು ಅನುದಾನದ ಲಭ್ಯತೆಯನ್ನು ಆಧರಿಸಿ ಮುಂದಿನ ವರ್ಷ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು ಎಂದು ಉತ್ತರಿಸಿದ್ದಾರೆ.