ಜಿಲ್ಲೆ

ಹನೂರು ಅಭಿವೃದ್ಧಿಯಲ್ಲಿ ಜನಪ್ರತಿನಿಗಳ ನಿರ್ಲಕ್ಷ್ಯ

ಚಾಮರಾಜನಗರ: ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಗ್ಯ ಎಂ.ಮಹೇಶ್ ಆರೋಪಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ಸಮಸ್ಯೆಗಳ ಮೂಟೆಯನ್ನು ಹೊತ್ತುಕೊಂಡಿದೆ. ದಿ.ಜಿ.ರಾಜುಗೌಡ ಹಾಗೂ ದಿ.ಎಚ್.ನಾಗಪ್ಪ ಅವರ ಅಧಿಕಾರದ ಅವಧಿಯನ್ನು ಹೊರತುಪಡಿಸಿದರೇ, ಇನ್ನುಳಿದ ಅವಧಿಯ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಇತ್ತೀಚೆಗೆ ಮಾಜಿ ಶಾಸಕ ಆರ್.ನರೇಂದ್ರ ಅವರು ತಾಲೂಕಿನಲ್ಲಿ ನೂರಾರು ಕೋಟಿ ರೂ, ವೆಚ್ಚದಲ್ಲಿ ನದಿಮೂಲದಿಂದ ಕೆರೆಗಳಿಗೆ ತುಂಬಿಸುವ ಯೋಜನೆ ಆಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವ ಕೆರೆಗಳಿಗೂ ನೀರು ತುಂಬಿಸಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೆರೆ ತುಂಬಿಸುವ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹನೂರು ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿರುವ ಮಾಜಿ ಶಾಸಕ ನರೇಂದ್ರ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದರಖಾಸ್ತು ಕಮಿಟಿಯನ್ನೇ ರಚನೆ ಮಾಡಿಲ್ಲ. ಇದರಿಂದಾಗಿ ಎಸ್ಸಿ, ಎಸ್ಟಿ ಬಗರ್‌ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗಿದೆ. ಹನೂರು ತಾಲೂಕು ಕೇಂದರವಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಪಟ್ಟಣ ಪಂಚಾಯಿತಿ ಕಾರ್ಯಾಲಯ ಬಿಟ್ಟರೇ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಮಾಜಿ ಸಂಸದ ಆರ್.ಧ್ರುವನಾರಾಯಣ್ ಪರಿಶ್ರಮದ ಲವಾಗಿ ನಿರ್ಮಾಣಗೊಂಡಿರುವ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳನ್ನು ಮಾಜಿ ಶಾಸಕರು ನಮ್ಮ ಅಭಿವೃದ್ಧಿ ಎಂದು ಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.

ಹನೂರು ವ್ಯಾಪ್ತಿಯಲ್ಲಿ ಹಲವಾರು ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ಜನರು ಸಂಚಾರ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ಜನರು ಗುಳೆ ಹೋಗುವಂತಹ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸೀಗನಾಯಕ, ಹನುಮಂತು, ಜಿಲ್ಲಾ ಸಂಯೋಜಕ ಕೆ.ಸಿದ್ದರಾಜು ದೊಡ್ಡಿಂದುವಾಡಿ, ಉಪಾಧ್ಯಕ್ಷ ಎ.ಮಂಜು, ಸುಂದರ್ ರಾಮಸಮುದ್ರ ಹಾಜರಿದ್ದರು.

ಹಾಲಿ-ಮಾಜಿ ಶಾಸಕರ ಕೆಸರೆರಚಾಟ:

ಹನೂರು ವಿಧಾನ ಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮ ಕಾಲದ ಅಭಿವೃದ್ಧಿ ಎಂದು ಕೆಸರೆರಚಾಟ ನಡೆಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಎಐಬಿಎಸ್‌ಪಿ ಮುಖಂಡರು ದೂರಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕೆಲವು ಮಾಜಿ ಶಾಸಕ ಆರ್.ನರೇಂದ್ರ ಅವರ ಅನತಿಯಂತಲೇ ನಡೆಯುತ್ತಿದೆ. ಇನ್ನು ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಅವರು ಹೊರಗಿನವರಾಗಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಹೊರಗಿನ ರಾಜಕಾರಣಿಗಳಿಗೆ ಗೋಬ್ಯಾಕ್ ಚಳುವಳಿ ಹಮ್ಮಿಕೊಳ್ಳಲಾಗುವುದು. ಸಮಸ್ಯೆಗಳನ್ನು ಬಗೆಹರಿಸಲು ಹೋರಾಟವನ್ನು ರೂಪಿಸಲಾಗುವುದು ಎಂದರು.