ಜಿಲ್ಲೆ

ಹನೂರಿನಲ್ಲಿ ಸಾಮೂಹಿಕ ಪ್ರಾಥನೆ ಸಲ್ಲಿಕೆ

ಹನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಸ್ಲಿಮರು ಗುರುವಾರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾಥನೆ ಸಲ್ಲಿಸುವ ಮೂಲಕ ಬಕ್ರೀದ್ ಅನ್ನು ಸಂಭ್ರಮ-ಸಡಗರದಿಂದ ಆಚರಿಸಿದರು.


ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನವನ್ನು ನೆನೆಯುವ ಸಲುವಾಗಿ ಆಚರಿಸುವ ಈ ಬಕ್ರಿದ್ ಹಬ್ಬವನ್ನು ತಾಲೂಕಿನಲ್ಲಿ ಹೆಚ್ಚು ಮುಸ್ಲಿಂ ಜನಾಂಗವಿರುವ ಮಂಗಲ, ಕಣ್ಣೂರು, ಎಲ್ಲೇಮಾಳ, ಬಸಪ್ಪನದೊಡ್ಡಿ, ಅಜ್ಜೀಪುರ, ಚಿಗತಾಪುರ, ಕೌದಳ್ಳಿ, ಬಂಡಳ್ಳಿ, ಕುರುಬರದೊಡ್ಡಿ, ಒಡೆಯರಪಾಳ್ಯ, ದೊಡ್ಡಿಂದುವಾಡಿ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಸಡಗರದಿಂದ ಆಚರಿಸಲಾಯಿತು.ಬೆಳಗ್ಗೆ 9.30ರ ವೇಳೆ ಮುಸ್ಲಿಮರು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರುಗಳು ಉಪನ್ಯಾಸ ನೀಡಿದರು. ನಂತರ ಮುಸ್ಲಿಮರು ಪರಸ್ಪರ ಆಲಂಗಿಸಿ ಹಾಗೂ ಹಸ್ತಲಾಘವ ಮಾಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.


ಪ್ರಾಥನೆ ಮುಗಿದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳಿದ ಮುಸ್ಲಿಮರು, ಹಜರತ್ ಇಬ್ರಾಹಿಂ ಅಲಿ ಸಲಂ ಅವರ ಹೆಸರಿನಲ್ಲಿ ಬಂಧು ಬಾಂಧವರಿಗೆ, ಧನ-ಧಾನ್ಯವನ್ನು ದಾನ ಮಾಡಿದರಲ್ಲದೆ, ಸಿಹಿ ವಿತರಿಸಿ ಸಂಭ್ರಮಪಟ್ಟರು. ಈ ವೇಳೆ ಪುಟಾಣಿಗಳು ನವನವೀನ ಬಟ್ಟೆ ಧರಿಸಿ ಸಂಭ್ರಮಿಸಿದರು.

ಹನೂರು ಪಟ್ಟಣದ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಸಮೀಪದ ಆರ್.ಎಸ್.ದೊಡ್ಡಿ ಬಳಿಯಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಈದ್ಗಾ ಮೈದಾನದಿಂದ ಮಲೆಮಹದೇಶ್ವರ ಬೆಟ್ಟ ಮುಖ್ಯರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆಯಲ್ಲಿ ತೆರಳಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮುಸ್ಲಿಮರು ಇತರ ಧರ್ಮದವರಿಗೂ ಕೂಡ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.