ಜಿಲ್ಲೆ

ಹನೂರಿನಲ್ಲಿ ವಿದ್ಯಾರ್ಥಿಗಳು, ಪತಂಜಲಿ ಸದಸ್ಯರಿಂದ ಜಾಗೃತಿ ಜಾಥಾ

ಹನೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶನಿವಾರ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಭ್ಯಾಸ ನಡೆಸುವ ಮೂಲಕ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಂಜಾನೆ 5.45 ರಿಂದ 7 ಗಂಟೆವರೆಗೆ ನಡೆದ ಯೋಗಾಭ್ಯಾಸದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಹಾಗೂ ಆಸರೆ ಫೌಂಡೇಷನ್‌ನ ಸುಮಾರು 70ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶಾಂತ ವಾತವರಣ ಹಿನ್ನೆಲೆಯಲ್ಲಿ ನೆರೆದಿದ್ದವರಲ್ಲಿ ಏಕಾಗ್ರತೆ ಮನೆ ಮಾಡಿತ್ತು. ಶಿಕ್ಷಕ ಮಾದ ತಂಬಡಿ ಅವರು ಚಲನ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಶಸಂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಬಾಸನ, ಸೇತು ಬಂಧಾಸನ, ಪವನ ಮುಕ್ತಾಸನ, ನಾಡಿ ಶೋಧಕ ಪ್ರಾಣಾಯಾಮ, ಶೀತಲಿ ಪ್ರಾಣಾಮಾಮ ಸೇರಿದಂತೆ 27 ಯೋಗಾಸನ ಕುರಿತು ಮಾರ್ಗದರ್ಶನ ನೀಡಿದರು. ಪ್ರಾರ್ಥನೆಯೊಂದಿಗೆ ಆರಂಭವಾದ ಯೋಗಾಭ್ಯಾಸ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

ಜಾಗೃತಿ ಜಾಥಾ

ವಿದ್ಯಾರ್ಥಿಗಳು ಹಾಗೂ ಪತಂಜಲಿ ಸದಸ್ಯರು ಯೋಗದ ಮಹತ್ವವನ್ನು ಒಳಗೊಂಡ ಫಲಕ ಹಿಡಿದು ಘೋಷಣೆ ಕೂಗುತ್ತ ಪಟ್ಟಣದ ಆರ್‌ಎಂಸಿಯಿಂದ ಹೊರಟು ಮ.ಬೆಟ್ಟದ ಮುಖ್ಯ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಸಾಗುತ್ತ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ದಿನಮಣ ನಾಯ್ಡು, ಹಿರಿಯ ಸದಸ್ಯ ರಾಧಕೃಷ್ಣ, ಜಯಕುಮಾರ್ ಇತರರು ಇದ್ದರು.

ಸಮಿತಿ ಸದಸ್ಯ ಮಾದ ತಂಬಡಿ ಮಾತನಾಡಿ, ಆಧುನಿಕ ಯುಗದಲ್ಲಿ ಕೆಲಸದ ಒತ್ತಡ, ಆಹಾರದ ಪದ್ಧತಿ, ಬದಲಾದ ಜೀವನಶೈಲಿಯಿಂದ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಉತ್ತಮ ಆರೋಗ್ಯಕ್ಕೆ ಪತಂಜಲಿ ಮಹರ್ಷಿಗಳು ಪರಿಚಯಿಸಿದ ಯೋಗವೂ ಅಷ್ಟೇ ಮುಖ್ಯ. ಆರೋಗ್ಯಪೂರ್ಣ ಜೀವನಕ್ಕೆ ಯೋಗ ಸುಯೋಗವಾಗಿದೆ. ಈ ಕಾರಣಕ್ಕಾಗಿಯೇ ವಿಶ್ವದ ಎಲ್ಲ ದೇಶಗಳು ಯೋಗವನ್ನು ಅನುಸರಿಸುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದುದ್ದಕ್ಕೂ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಯೋಗ ಬಂಧು ಜಯಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಒಂದಲ್ಲ ಒಂದು ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದು, ಜೀವನದಲ್ಲಿ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲೇ ಸಕಾರಾತ್ಮಕ ಭಾವನೆ ಹೊಂದುವುದರ ಜತೆಗೆ ಯೋಗಾಭ್ಯಾಸ ಮಾಡಬೇಕು. ಇದರಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸದೃಢ ಸಾಧಿಸಬಹುದು. ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.