ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿ ಹನೂರಿನ ಸೆಸ್ಕ್ ಕಚೇರಿ ಮುಂಭಾಗ ಧರಣಿನಿರತ ಪ್ರತಿಭಟನಕಾರರ ಸ್ಥಳಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಭರವಸೆ ನೀಡಿದರು. ಗುರುಪ್ರಸಾದ್, ತಾರಾ, ಲಿಂಗರಾಜು, ರಂಗಸ್ವಾಮಿ, ಗೌಡೇಗೌಡ, ಅಮ್ಜಾದ್‌ಖಾನ್, ಕನಕಮ್ಮ ಇತರರು ಇದ್ದರು.  
ಜಿಲ್ಲೆ

ಹನೂರಿನಲ್ಲಿ ರೈತ ಸಂಘ ಪ್ರತಿಭಟನೆ ಅಂತ್ಯ

ಹನೂರು: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ ರಾಮಾಪುರದಲ್ಲಿ ಸೆಸ್ಕ್ ಉಪ ವಿಭಾಗವನ್ನು ತೆರೆಯುವಂತೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ರೈತರು ನಡೆಸುತ್ತಿದ್ದ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ವಿಷಯ ತಿಳಿದ ಶಾಸಕ ಎಂ.ಆರ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಸಮಸ್ಯೆ ಆಲಿಸಿದರು. ಈ ವೇಳೆ ರೈತ ಸಂಘದ ಕೊಳ್ಳೇಗಾಲ ತಾಲೂಕು ಘಟಕದ ಮಾಜಿ ಅಧ್ಯಕ್ಷ ಗೌಡೇಗೌಡ ಹಾಗೂ ಹನೂರು ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್, ಶಾಸಕರು ಹಾಗೂ ಸೆಸ್ಕ್ ಇಇ ತಾರಾ ಅವರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಸಮಸ್ಯೆ ಆಲಿಸಿ ಮಾತನಾಡಿದ ಶಾಸಕ ಮಂಜುನಾಥ್, ಹನೂರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಮನವಿ ಮಾಡಲಾಗಿದೆ. ಅಲ್ಲದೆ ವಿದ್ಯುತ್ ಸಮಸ್ಯೆ ಬಗೆಹರಿಸುವ ಸಂಬಂಧ ಇಂಧನ ಸಚಿವ ಕೆ.ಜೆ ಜಾರ್ಜ್ ಭರವಸೆ ನೀಡಿದ್ದಾರೆ. ಕ್ಷೇತ್ರದಲ್ಲಿ ಉಪಟಳ ನೀಡುತ್ತಿರುವ ಕಾಡು ಪ್ರಾಣಿಗಳ ತಡೆಗೆ ಕಡಿವಾಣ ಹಾಕುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಆದರೆ ಇದಕ್ಕೊಪ್ಪದ ಪ್ರತಿಭಟನಕಾರರು, ಇಂತಿಷ್ಟು ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವ ಮಾತೇ ಇಲ್ಲ ಎಂದು ಪಟ್ಟು ಹಿಡಿದರು. ಬಳಿಕ ಪರಿಸ್ಥಿತಿಯನ್ನು ಅರಿತ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ 15 ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಮ್ಮ ಜತೆ ನಾನೂ ಸಹ ಹೋರಾಟಕ್ಕೆ ಸಿದ್ಧ ಎಂದು ಅಭಯ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ತಹಸೀಲ್ದಾರ್ ಗುರುಪ್ರಸಾದ್, ಸೆಸ್ಕ್ ಇಇ ಲಿಂಗರಾಜು, ಎಇಇ ಶಂಕರ್, ಎಇ ರಂಗಸ್ವಾಮಿ ಇತರರು ಇದ್ದರು.