ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿ.ಎಸ್.ದೊಡ್ದಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಆರ್.ನರೇಂದ್ರ ಮಾತನಾಡಿರುವುದು. 
ಜಿಲ್ಲೆ

ಹನೂರಿನಲ್ಲಿ ಪಕ್ಷಾಂತರ ಪರ್ವ

ಹನೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹನೂರಿನಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಆಕಾಂಕ್ಷಿಗಳು ಮನಪರಿವರ್ತನೆ ಮಾಡಿ ತಮ್ಮ ಪಕ್ಷಕ್ಕೆ ಸೆಳೆಯುತ್ತಿದ್ದಾರೆ.

ಶಾಸಕ ಆರ್.ನರೇಂದ್ರ ಕಾರ್ಯಕರ್ತರ ಸಭೆ ನಡೆಸುವಾಗಲೆಲ್ಲ ಪಕ್ಷ ಸೇರ್ಪಡೆಗೆ ಆದ್ಯತೆ ನೀಡುತ್ತಿದ್ದಾರೆ. ಪಕ್ಷ ಬಿಟ್ಟು ಹೋಗಿರುವವರೂ ವಾಪಸ್ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಪಕ್ಷ ಸಂಘಟನೆ ಜತೆಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು, ಹಿರಿಯ ಮುಖಂಡರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವೆಂಟಕೇಶ್, ನಿಶಾಂತ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಮತದಾರರನ್ನು ಓಲೈಸುವ ಕಾರ್ಯ ಶುರು ಮಾಡಿದ್ದಾರೆ. ಹಾಗಾಗಿ ಹನೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಪಕ್ಷಾಂತರಿ ಚಟುವಟಿಕೆಗಳಿಂದ ರಾಜಕೀಯ ವಲಯ ದಿನಕ್ಕೊಂದು ಹೊಸ ರೂಪ ಪಡೆಯುತ್ತಿದೆ. ಮತ್ತೊಂದೆಡೆ ಕಾರ್ಯಕರ್ತರಲ್ಲಿ ಗೊಂದಲದ ವಾತವರಣ ನಿರ್ಮಾಣವಾಗುತ್ತಿದೆ.

ಕಾರ್ಯಕರ್ತರ ಸಭೆ: ಕಳೆದ ಬಾರಿಯ ಚುನಾವಣೆಯಲ್ಲಿ 60,444 ಮತ ಪಡೆಯುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದ್ದ ಶಾಸಕ ಆರ್.ನರೇಂದ್ರ ತಮ್ಮದೆ ಆದ ವರ್ಚಸ್ಸು ಹೊಂದಿದ್ದಾರೆ. ಆದರೆ ಇತ್ತೀಚೆಗೆ ನಡೆಯುತ್ತಿರುವ ಈ ಎಲ್ಲ ರಾಜಕೀಯ ಬೆಳವಣಿಗೆಯಿಂದ ಕ್ಷೇತ್ರದಾದ್ಯಂತ ಪ್ರವಾಸ ಶುರು ಮಾಡಿದ್ದು, ಜಿಪಂ ವ್ಯಾಪ್ತಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಾರಣಾಂತರಗಳಿಂದ ಪಕ್ಷದಿಂದ ಹೊರ ಹೋಗಿದ್ದವರನ್ನು ಸೇರ್ಪಡೆಗೊಳಿಸುವ ಕಾರ್ಯ ತೀವ್ರತೆ ಪಡೆದುಕೊಂಡಿದೆ. ಈ ದಿಸೆಯಲ್ಲಿ ಶಾಸಕ ಆರ್.ನರೇಂದ್ರ ಚುನಾವಣೆಗೆ ಇನ್ನಿಲ್ಲದ ತಂತ್ರ ಅನುಸರಿಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ತ್ರಿಕೋನ ಸ್ಪರ್ಧೆ: 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 13,258 ಮತ ಪಡೆದು ಸೋಲು ಕಂಡಿದ್ದ ಡಾ.ಎಸ್.ದತ್ತೇಶ್‌ಕುಮಾರ್ ನಿರಂತರವಾಗಿ ತಮ್ಮ ಸಾಮಾಜಿಕ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕಳೆದ ಬಾರಿ 56,931 ಮತಗಳನ್ನು ಪಡೆದು ಆರ್.ನರೇಂದ್ರಗೆ ತೀವ್ರ ಪೈಪೋಟಿ ನೀಡಿದ್ದ ಮಾಜಿ ಸಚಿವ ದಿ.ಎಚ್.ನಾಗಪ್ಪ ಅವರ ಪುತ್ರ ಡಾ.ಪ್ರೀತನ್ ನಾಗಪ್ಪ ಕೂಡ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಗೆ ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಜೆಡಿಎಸ್‌ನ ಮಂಜುನಾಥ್ 44,957 ಮತ ಪಡೆದಿದ್ದರು. ಆರ್.ನರೇಂದ್ರ 60,444 ಮತ ಪಡೆದಿದ್ದರು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಕ್ಷೇತ್ರದ ಚಿತ್ರಣ: ಹನೂರು ವಿಧಾನಸಭಾ ಕ್ಷೇತ್ರ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಆದ್ದರಿಂದ ಈ ಕ್ಷೇತ್ರದಲ್ಲಿ ದಿ.ರಾಜೂಗೌಡ ಹಾಗೂ ದಿ.ಎಚ್. ನಾಗಪ್ಪ ಅವರ ಕುಟುಂಬ ಈವರೆಗೂ ಚುನಾವಣೆ ಎದುರಿಸಿ ಸೋಲು ಗೆಲುವು ಕಂಡಿದೆ.

ಈವರೆಗೂ ರಾಜೂಗೌಡ ಅವರ ಕುಟುಂಬದಲ್ಲಿ ಜಿ.ವಿ.ಗೌಡ ಅವರು 2 ಬಾರಿ ಶಾಸಕರಾಗಿ, ಜಿ.ರಾಜುಗೌಡ 3 ಬಾರಿ ಶಾಸಕರಾಗಿ (1 ಬಾರಿ ಸಚಿವ) ಹಾಗೂ ಹಾಲಿ ಶಾಸಕ ಆರ್. ನರೇಂದ್ರ 3 ಬಾರಿ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಇತ್ತ ದಿ.ನಾಗಪ್ಪ ಅವರ ಕುಟುಂಬದಲ್ಲಿ ದಿ.ನಾಗಪ್ಪ ಅವರು 2 ಬಾರಿ ಶಾಸಕರಾಗಿ (1 ಬಾರಿ ಸಚಿವ) ಹಾಗೂ ಪತ್ನಿ ಪರಿಮಳಾ ನಾಗಪ್ಪ ಅವರು 1 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಮುಂಬರುವ ಚುನಾವಣೆಗೆ ಕಾಂಗ್ರೆಸ್‌ನಿಂದ ಶಾಸಕ ಆರ್.ನರೇಂದ್ರ ಹಾಗೂ ಜೆಡಿಎಸ್‌ನಿಂದ ಎಂ.ಆರ್.ಮಂಜುನಾಥ್ ಅವರಿಗೆ ಟಿಕೆಟ್ ಖಚಿತವಾಗಿದೆ. ಇನ್ನು ಬಿಜೆಪಿಯಲ್ಲಿ ಡಾ.ಪ್ರೀತನ್ ನಾಗಪ್ಪ, ಡಾ.ಎಸ್ ದತ್ತೇಶ್‌ಕುಮಾರ್, ಬಿ.ವೆಂಕಟೇಶ್ ಹಾಗೂ ನಿಶಾಂತ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ.