ಜಿಲ್ಲೆ

ಹನೂರಿನಲ್ಲಿ ನ್ಯಾಯಾಲಯ ಕಾರ್ಯಾರಂಭ : ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಉದ್ಘಾಟನೆ



ಚಾಮರಾಜನಗರ : ಹನೂರು ಭಾಗದ ಜನರ ಹಲವು ವರ್ಷಗಳ ಕನಸಾಗಿದ್ದ ನ್ಯಾಯಾಲಯ ಸ್ಥಾಪನೆ ಶನಿವಾರ ಹನೂರಿನಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದ ಉದ್ಘಾಟನೆಯಾಗುವುದರ ಮೂಲಕ ನನಸಾಗಿಸಿದೆ. ಸಾರ್ವಜನಿಕರಲ್ಲಿ ಸಂತಸವನ್ನು ಉಂಟು ಮಾಡಿದೆ.


ಹನೂರು ಒಳಗೊಂಡಂತೆ ಕೊಳ್ಳೇಗಾಲವು ಈ ಹಿಂದೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದು, ಕೊಯಮತ್ತೂರು ಜಿಲ್ಲೆಗೆ ಒಳಪಟ್ಟಿತ್ತು. ಪ್ರಕರಣಗಳ ಇತ್ಯರ್ಥಕ್ಕಾಗಿ 1896ರ ಬ್ರಿಟಿಷರ ಕಾಲದಲ್ಲಿ ಕೊಳ್ಳೇಗಾಲದಲ್ಲಿ ಪ್ರಾಥಮಿಕ ಹಂತದ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು.

1956ರಲ್ಲಿ ಪ್ರಾಂತ್ಯ ವಿಂಗಡಣೆಯಾದ ಬಳಿಕ ಈ ಭಾಗವು ಮೈಸೂರು ಜಿಲ್ಲೆಗೆ ಒಳಪಟ್ಟಿತು. ಇಲ್ಲಿನ ಜನರು ಪ್ರಕರಣಗಳ ಇತ್ಯರ್ಥಕ್ಕಾಗಿ ಎಸಿ, ಡಿಸಿ ಕೋರ್ಟ್ ಹಾಗೂ ಇನ್ನಿತರ ಪ್ರಕರಣಗಳಿಗಾಗಿ ಮೈಸೂರು ನ್ಯಾಯಾಲಯಕ್ಕೆ ಅಲೆಯುವಂತಾಗಿತ್ತು. 1997ರಲ್ಲಿ ಚಾಮರಾಜನಗರ ಮೈಸೂರು ಜಿಲ್ಲೆಯಿಂದ ಪ್ರತ್ಯೇಕವಾದ ಬಳಿಕ ಜಿಲ್ಲೆಯಲ್ಲಿ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಈ ವೇಳೆ ಕೊಳ್ಳೇಗಾಲದಲ್ಲಿ ವಿವಿಧ ಶ್ರೇಣಿಯ ನ್ಯಾಯಾಲಯವನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಬಳಿಕ 4 ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು, ಕಾರ್ಯನಿರ್ವಹಿಸಲಾಗುತ್ತಿದೆ.


ಆದರೆ, ಹನೂರು ಕೊಳ್ಳೇಗಾಲದಿಂದ ಬೇರ್ಪಟ್ಟು ಪ್ರತ್ಯೇಕ ತಾಲೂಕಾಗಿ ರಚನೆಯಾಗಿ 5 ವರ್ಷ ಕಳೆದರೂ ಹನೂರಿನಲ್ಲಿ ನ್ಯಾಯಾಲಯ ಸ್ಥಾಪನೆಯಾಗಿರಲಿಲ್ಲ. ಇದರಿಂದ ಸುಮಾರು 110 ಕಿ.ಮೀ. ಅಂತರವನ್ನು ಹೊಂದಿರುವ ಗೋಪಿನಾಥಂ ಹಾಗೂ ಈ ಭಾಗದ ಜನರು ಪ್ರಕರಣ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಕೊಳ್ಳೇಗಾಲದ ನ್ಯಾಯಾಲಯಕ್ಕೆ ಅಲೆಯುವಂತಾಗಿತ್ತು.

ಇತ್ತ ಪೊಲೀಸರು, ಇತರ ಅಧಿಕಾರಿಗಳು ಪ್ರಕರಣಗಳ ನಿಮಿತ್ತ ಕೊಳ್ಳೇಗಾಲಕ್ಕೆ ತೆರಳಬೇಕಿತ್ತು. ಇದರಿಂದ ತೊಂದರೆ ಜತೆಗೆ ಸಮಯವು ವ್ಯರ್ಥವಾಗುತ್ತಿತ್ತು. ಹನೂರಿನಲ್ಲಿ ನ್ಯಾಯಾಲಯ ತೆರೆಯುವಂತೆ ಸಾರ್ವಜನಿಕರು ಕಳೆದ ಹಲವು ವರ್ಷದಿಂದ ಆಗಾಗ್ಗೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಕಟ್ಟಡದ ಕೊರತೆಯಿಂದ ನ್ಯಾಯಾಲಯ ತೆರೆಯಲು ಸಾಧ್ಯವಾಗಿರಲಿಲ್ಲ.

ಇದೀಗ ಹನೂರಿನ ಶ್ರೀ ಮೈಸೂರು ಮಾರಮ್ಮ ದೇಗುಲ ಸಮೀಪದ ಖಾಸಗಿ ಕಟ್ಟಡದಲ್ಲಿ ನ್ಯಾಯಾಲಯ ಉದ್ಘಾಟನೆಯಾಗಿರುವುದು ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಸಂತಸ ಮೂಡಿಸಿದೆ.


ನ್ಯಾಯಾಲಯದ ಉದ್ಘಾಟನೆ: ಹನೂರಿನಲ್ಲಿ ಇದೇ ಪ್ರಥಮ ಬಾರಿಗೆ ನ್ಯಾಯಾಲಯ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಪೊಲೀಸ್, ಅಬಕಾರಿ, ಅರಣ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಬೆಂಗಳೂರಿನಿಂದ ಆಗಮಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್, ಹೈಕೋರ್ಟ್ ಮತ್ತು ಚಾ.ನಗರ ಆಡಳಿತಾತ್ಮಕ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ, ಕೊಳ್ಳೇಗಾಲದ ಪ್ರಧಾನ ನ್ಯಾಯಾಧೀಶೆ ನಂದಿನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಸ್ ಬಸವರಾಜು, ಕಾರ್ಯದರ್ಶಿ ಎಂ. ಮೋಹನ್‌ಕುಮಾರ್ ಇತರರ ಸಮ್ಮುಖದಲ್ಲಿ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿಎಂಎಫ್‌ಸಿ ಸಂಚಾರಿ ನ್ಯಾಯಾಲಯದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ವಾರದಲ್ಲಿ 4 ದಿನ ಕಾರ್ಯನಿರ್ವಹಣೆ
ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಮಾತನಾಡಿ, ನ್ಯಾಯಾಂಗದ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸುವುದು ಸರ್ಕಾರದ ಧ್ಯೇಯ. ಈ ದಿಸೆಯಲ್ಲಿ ಹನೂರಿನಲ್ಲಿ ನ್ಯಾಯಾಲಯ ಉದ್ಘಾಟನೆಯಾಗಿರುವುದು ಸುದಿನವಾಗಿದೆ. 5 ವರ್ಷದಿಂದ ಸಂದಬೇಕಾದ ಕಾಲ ಈಗ ಕೂಡಿ ಬಂದಿದೆ. ಈ ಸಂಚಾರ ನ್ಯಾಯಾಲಯವು ವಾರದಲ್ಲಿ 4 ದಿನ ಕಾರ್ಯನಿರ್ವಹಿಸಲಿದೆ ಎಂದರು.


ನ್ಯಾಯಾಲಯಕ್ಕೆ ಕಟ್ಟಡ, ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾದ ಬಳಿಕ ಉತ್ತಮ ಸೌಕರ್ಯ ದೊರಕಲಿದೆ ಎಂದು ತಿಳಿಸಿದರು.


ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ನ್ಯಾಯಾಲಯದ ಸ್ಥಾಪನೆಯ ಉದ್ದೇಶ ನ್ಯಾಯ ದೊರಕಿಸಿ ಕೊಡುವುದಾಗಿದೆ. ಇದರಲ್ಲಿ ಕಕ್ಷಿದಾರ ಮತ್ತು ವಕೀಲರ ಸಹಕಾರ ಅತ್ಯಗತ್ಯ. ನ್ಯಾಯಾಧೀಶರು ಹಾಗೂ ವಕೀಲರು ಒಂದು ರಥದ 2 ಚಕ್ರಗಳಂತೆ. ಇವೆರಡರಲ್ಲಿ ಸಮಸ್ಯೆ ಉಂಟಾದರೆ ನ್ಯಾಯಪರತೀರ್ಪನ್ನು ನೀಡಲು ತೊಡಕಾಗಲಿದೆ. ಈ ಬಗ್ಗೆ ಮನದಟ್ಟು ಮಾಡಿಕೊಂಡು ಕಕ್ಷಿದಾರನಿಗೆ ನ್ಯಾಯವನ್ನು ಒದಗಿಸಬೇಕು ಎಂದರು.
ನ್ಯಾಯಾಧೀಶರಾದ ರಘು, ನಿಶಾರಾಣಿ, ವಕೀಲರಾದ ಶ್ರೀಧರ್, ಆನಂದ್, ರಾಧಕೃಷ್ಣ, ನಾಗರಾಜು, ಪ್ರಕಾಶ್, ತಹಸೀಲ್ದಾರ್ ಗುರುಪ್ರಸಾದ್ ಇತರರಿದ್ದರು.