ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆರೋಗ್ಯ ವಿಚಾರಿಸಿದ ಅರುಂದತಿ. ಕೆ.ಎಂ ವಿಶ್ವೇಶ್ವರಯ್ಯ, ಡಾ.ರಾಜಶೇಖರ್ ಇದ್ದರು. 
ಜಿಲ್ಲೆ

ಹನೂರಿನಲ್ಲಿ ಡಯಾಲಿಸೀಸ್ ಕೇಂದ್ರ ತೆರೆಯಲು ಕ್ರಮ

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಬುಧವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಿಷನ್ ನಿರ್ದೇಶಕಿ ಅರುದಂತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.


ಆಸ್ಪತ್ರೆಯಲ್ಲಿ ನಿರ್ಮಾಣ ಹಂತದಲ್ಲಿರುವ ತುರ್ತುನಿಗಾ ಘಟಕ, ಒರರೋಗಿ ವಿಭಾಗ, ಪುರುಷರು ಹಾಗೂ ಮಹಿಳೆಯರ ಒಳರೋಗಿಗಳ ವಾರ್ಡ್, ಚುಚ್ಚುಮದ್ದು ವಿಭಾಗ, ಹೆರಿಗೆ ವಾರ್ಡ್, ಪ್ರಧಾನಮಂತ್ರಿ ಜನೌಷಧ ಕೇಂದ್ರ, ಡಯಾಲಿಸಿಸ್ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.


ಮಹಿಳೆಯರ ವಾರ್ಡ್‌ಗೆ ತೆರಳಿದ್ದ ವೇಳೆ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯ

ಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿದೆಯೇ ಎಂದು ರೋಗಿಗಳನ್ನು ಪ್ರಶ್ನಿಸಿದರು. ನಿಮಗಿಲ್ಲಿ ಉತ್ತಮವಾದ ಊಟ ಸಿಗುತ್ತಿದೆಯೇ ಎಂದು ವಿಚಾರಿಸಿದರು.
ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ರೋಗಿಯೊಬ್ಬರು ಡಯಾಲಿಸಿಸ್ ಕೇಂದ್ರ ಹನೂರು ತಾಲೂಕಿಗೂ ಅವಶ್ಯಕತೆ ಇದೆ. ಡಯಾಲಿಸಿಸ್‌ಗಾಗಿ ನೂರಾರು ಕಿ.ಲೋ ಮೀಟರ್ ನಿಂದ ಬರಬೇಕಾಗಿದೆ. ಇದರಿಂದ ಹನೂರು ಭಾಗದ ಜನರಿಗೆ ತೊಂದರೆಯಾಗಿದೆ ಎಂದು ಅಹವಾಲು ಸಲ್ಲಿಸಿದರು. ಜನರ ಆರೋಗ್ಯದ ದೃಷ್ಟಿಯಿಂದ ಹನೂರು ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ತೆಗೆಯಲು ಕ್ರಮ ವಹಿಸಲಾಗುವುದೆಂದು ಅರುದಂತಿ ಭರವಸೆ ನೀಡಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವುದರಿಂದ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಬೇಕಾದ ಅವಶ್ಯಕವಿದೆ. ಬಹುತೇಕ ತುರ್ತು ರೋಗಿಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗಳಿಗೆ ರವಾನಿಸುವುದು ಹಾಗೂ ಭಾನುವಾರ ದಿನಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಸಿಗುತ್ತಿಲ್ಲ ಎಂಬ ಆರೋಪವಿದೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮವಹಿಸುತ್ತೇವೆ ಎಂದರು.


ಸ್ಕ್ಯಾನಿಂಗ್ ಹಾಗೂ 127 ರೀತಿಯ ರಕ್ತ ಪರೀಕ್ಷೆಗಳನ್ನು ತಾಲೂಕು ಆಸ್ಪತ್ರೆಯಲ್ಲೇ ಪ್ರಾರಂಭಿಸಲಾಗುತ್ತದೆ. 15ನೇ ಹಣಕಾಸು ಯೋಜನೆಯಡಿ ಹೈಟೆಕ್ ಲ್ಯಾಬ್ ನಿರ್ಮಾಣ ಮಾಡಲು ಹಣ ಬಿಡುಗಡೆಯಾಗಲಿದೆ. ಜತೆಗೆ, ಶೀಘ್ರವೇ ಎಂಸಿಎಚ್ ಆಸ್ಪತ್ರೆ ಚಾಲನೆ ಸಿಗಲಿದೆ. ಐಸಿಯು ಘಟಕ ಪ್ರಾರಂಭವಾಗಲಿದ್ದು, ಜನರಿಗೆ ಉತ್ತಮ ಆರೋಗ್ಯ ಸಿಗಲಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಂ ವಿಶ್ವೇಶ್ವರಯ್ಯ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಶೇಖರ್, ತಾಲೂಕು ಆರೋಗ್ಯಾಧಿಕಾರಿ ಗೋಪಾಲ್, ವೈದ್ಯ ವೃಂದ ಹಾಗೂ ಸಿಬ್ಬಂದಿ ಇದ್ದರು.