ಹನೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಆದ್ದರಿಂದ ಹನೂರಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲದ ಮುಂಭಾಗ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದು, ಜನಮನ್ನಣೆ ಗಳಿಸಿದೆ. ಈ ದಿಸೆಯಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಪಕ್ಷದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ವಿಜಯ ಬೂತ್ ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಯಶಸ್ವಿಯಾಗಿದೆ. ಇದೀಗ ರಾಜ್ಯಾದ್ಯಂತ ಏಕಕಾಲದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಕಾರ್ಯಕರ್ತರು ಕಾಳಜಿ ವಹಿಸಿ ಪಕ್ಷವನ್ನು ಸಂಘಟಿಸುವುದರ ಜತೆಗೆ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಈ ದಿಸೆಯಲ್ಲಿ ಮುಖಂಡರು ಸಹ ಕೈಜೋಡಿಸಬೇಕು ಎಂದು ತಿಳಿಸಿದರು.
ಉತ್ತಮ ಸ್ಪಂದನೆ: ಬಿಜೆಪಿ ಸರ್ಕಾರದ ಸಾಧನೆಗಳು ಜನತೆಯ ಮನದಲ್ಲಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹಾಗಾಗಿ ಈ ಬಾರಿ ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದರ ಮೂಲಕ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ. ಜತೆಗೆ ಹನೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕರನ್ನು ಪಡೆಯಲೇಬೇಕು ಎಂದು ಪಣ ತೊಟ್ಟಿದ್ದೇವೆ. ಆದ್ದರಿಂದ ಹನೂರಿನಲ್ಲಿ ಕಮಲ ಅರಳಿಸುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ನಿರ್ಧರಿಸಲಿದೆ: ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲವಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ 40 ವರ್ಷಗಳ ಹಿಂದೆ ಬಿಜೆಪಿಗೆ ಉತ್ತಮ ಬೆಂಬಲ ಇರಲಿಲ್ಲ. ಆದರೀಗ ಪಕ್ಷದ ಸಿದ್ಧಾಂತ, ಸರ್ಕಾರದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಎಲ್ಲರನ್ನು ಮೆಚ್ಚುವಂತೆ ಮಾಡಿದೆ. ಆದ್ದರಿಂದ ಎಲ್ಲ ಕ್ಷೇತ್ರದಲ್ಲೂ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆ. ಇದು ಒಂದು ಕಡೆ ಸಂತೋಷವೂ ಹೌದು. ಆದ್ದರಿಂದ ಈ ಬಗ್ಗೆ ಪಕ್ಷ ಕೂಲಂಕಷವಾಗಿ ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಹಿರಿಯರ ತೀರ್ಮಾನವನ್ನು ಗೌರವಿಸುವ ಗುಣ ಮುಖಂಡರಲ್ಲಿದೆ. ಯಾವುದೇ ಕಾರಣಕ್ಕೂ ವೈಮನಸ್ಸು ತಲೆದೂರುವ ಪ್ರಶ್ನೆಯೇ ಇಲ್ಲ ಎಂದರು.
ಬಳಿಕ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಪಟ್ಟಣದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಿಗೆ ಬಿಜೆಪಿ ಸಾಧನೆಯುಳ್ಳ ಕರಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್, ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್, ಮಂಡಲಗಳ ಅಧ್ಯಕ್ಷರಾದ ಸಿದ್ದಪ್ಪ, ವೀರಭದ್ರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೀನಾ, ಮುಖಂಡರಾದ ಡಾ.ಪ್ರೀತನ್‌ನಾಗಪ್ಪ, ನಿಶಾಂತ್, ಲೋಕೇಶ್ ಜತ್ತಿ, ವೆಂಕಟೇಗೌಡ ಇನ್ನಿತರರು ಇದ್ದರು.