ಬೈಲಹೊಂಗಲ ಪಟ್ಟಣದ ಕೆರೆಯ ದಂಡೆಯ ರಸ್ತೆ ಸಂಪೂರ್ಣ ಹದಗೆಟ್ಟಿರುವುದು. 
ಜಿಲ್ಲೆ

ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ಹೈರಾಣ

ಬೈಲಹೊಂಗಲ: ಪಟ್ಟಣದ ದೊಡ್ಡ ಕೆರೆಯ ದಂಡೆಯ ನಿವಾಸಿಗಳು ಹದಗೆಟ್ಟ ರಸ್ತೆ, ಗಲೀಜು ನೀರು ತುಂಬಿದ ಚರಂಡಿ, ಗಬ್ಬೆದ್ದು ನಾರುತ್ತಿರುವ ವಾತಾವರಣದಿಂದ ಅನಾರೋಗ್ಯ ಪೀಡಿತರಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಹನುಮಂತದೇವರ ದೇವಸ್ಥಾನದ ಹಿಂದಿನ ಗೊಲ್ಲರ ಹಟ್ಟಿ ಹಾಗೂ ಮೌನೇಶ್ವರ ನಗರದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ತುಂಬೆಲ್ಲ ಮಾರುದ್ದ ಗುಂಡಿಗಳು ನಿರ್ಮಾಣವಾಗಿವೆ. ಮನೆಯಿಂದ ಪೇಟೆಗೆ ಬರಲು ಹರಸಾಹಸ ಮಾಡುವಂತಾಗಿದೆ.

ಅನೇಕ ವರ್ಷಗಳ ಹಿಂದೆ ನಿರ್ಮಿಸಿದ ಡಾಂಬರ್ ರಸ್ತೆ ಹದಗೆಟ್ಟಿದ್ದು, ಸಂಚಾರ ಮಾಡದ ಸ್ಥಿತಿ ತಂದೊಡ್ಡಿದೆ. ರಸ್ತೆಯೇ ಕಾಣದಷ್ಟು ನೀರು ತುಂಬಿಕೊಂಡಿದೆ. ನಮ್ಮ ಮಕ್ಕಳು ಶಾಲೆಗೆ ತೆರಳಲು ಕಷ್ಟ ಪಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ದುಸ್ಥಿತಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಈ ರಸ್ತೆಯ ಮೂಲಕ ಪಟ್ಟಣದ ಜನತೆ ಸಾಯಿ ಬಾಬಾ ಮಂದಿರಕ್ಕೆ, ಎಪಿಎಂಸಿಗೆ ತೆರಳುವ ರಸ್ತೆ ಇದಾಗಿದ್ದು, ಇಲ್ಲಿ ರಸ್ತೆ, ಚರಂಡಿ ಸಹಿತ ವಿದ್ಯುತ್ ವ್ಯವಸ್ಥೆ ಕೂಡ ಸರಿಯಾಗಿಲ್ಲದ್ದರಿಂದ ಜನತೆ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಕೆರೆಯ ದಂಡೆಯ ಪ್ರದೇಶಕ್ಕೆ ಯಾರೂ ದಿಕ್ಕಿಲ್ಲದಂತಾಗಿದೆ. ಇಲ್ಲಿ ವಾಸಿಸುವ ನಾವುಗಳು ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮ ಆರೋಗ್ಯಕ್ಕೆ ಧಕ್ಕೆ ಆಗುವ ಮೊದಲೆ ಈ ಭಾಗದ ಪರಿಸ್ಥಿತಿ ಸುಧಾರಿಸಲು ಕ್ರಮ ಜರುಗಿಸಬೇಕು.| ಅಜಯ ಮಡಿವಾಳರ, ನಿವಾಸಿಮಳೆಗಾಲ ಸ್ವಲ್ಪ ಕಡಿಮೆಯಾದ ತಕ್ಷಣ ರಸ್ತೆಯನ್ನು ತಾತ್ಕಾಲಿಕವಾಗಿ ಸುಧಾರಿಸಿ, ಬರುವ ಅನುದಾನದಲ್ಲಿ ರಸ್ತೆ ಮಾಡಿಸಲಾಗುವುದು. ಕೂಡಲೆ ಸೊಳ್ಳೆ ನಿಯಂತ್ರಕ ಫಾಗಿಂಗ್, ಚರಂಡಿ ಸ್ವಚ್ಛತೆ ಕೈಗೊಳ್ಳಲಾಗುವುದು.| ಕವಿರಾಜ ನಾಗನೂರ, ಪುರಸಭೆ ಮುಖ್ಯಾಧಿಕಾರಿ

| ಬಸವರಾಜ ಕಲಾದಗಿ ಬೈಲಹೊಂಗಲ